ಕೂಲಿ ಸಿಗದೇ ಕಾರ್ಮಿಕರ ಮಕ್ಕಳ ಶಿಕ್ಷಣ, ವೃದ್ಧರ ಆರೈಕೆಗೂ ಆತಂಕ

| Published : Nov 07 2025, 02:45 AM IST

ಕೂಲಿ ಸಿಗದೇ ಕಾರ್ಮಿಕರ ಮಕ್ಕಳ ಶಿಕ್ಷಣ, ವೃದ್ಧರ ಆರೈಕೆಗೂ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೃಷ್ಟಿ ಕಾರಣದಿಂದಾಗಿ ಕೃಷಿ ಕಾರ್ಮಿಕರಿಗೆ ಸರಿಯಾದ ಕೂಲಿಯೂ ಸಿಗದೆ ವಲಸೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಅಂತಹವರ ಮಕ್ಕಳ ಶಿಕ್ಷಣಕ್ಕೆ, ವೃದ್ಧರ ಆರೈಕೆಗೂ ಅಡ್ಡಿಯಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.

ಹಾನಗಲ್ಲ: ಅತಿವೃಷ್ಟಿ ಕಾರಣದಿಂದಾಗಿ ಕೃಷಿ ಕಾರ್ಮಿಕರಿಗೆ ಸರಿಯಾದ ಕೂಲಿಯೂ ಸಿಗದೆ ವಲಸೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಅಂತಹವರ ಮಕ್ಕಳ ಶಿಕ್ಷಣಕ್ಕೆ, ವೃದ್ಧರ ಆರೈಕೆಗೂ ಅಡ್ಡಿಯಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.

ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದಲ್ಲಿ ಬೆಂಗಳೂರಿನ ಎಫ್‌ವಿಟಿಆರ್‌ಎಸ್ ಸಂಸ್ಥೆ ಸಹಯೋಗದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಹೊಲ-ಗದ್ದೆಗಳಲ್ಲಿ ಸರಿಯಾದ ಸಮಯಕ್ಕೆ ಕೂಲಿ ಕೆಲಸ ಸಿಗದೇ ವಲಸೆ ಹೋಗುವುದು ವಿಪರೀತವಾಗಿ ಕಂಡು ಬರುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ, ವೃದ್ಧರ ಆರೈಕೆಗೆ, ಅಂಗವಿಕಲರು ಒಂದು ಸ್ಥಳದಿಂದ ಇನ್ನೂಂದು ಸ್ಥಳಕ್ಕೆ ಕರೆದುಕೊಂಡು ಹೋಗಲು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕಷ್ಟಕರ ವಾತಾವರಣ ನಿರ್ಮಾಣವಾಗುತ್ತಿದೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ಸ್ವ ಉದ್ಯೋಗ ಸೃಷ್ಟಿ ಮಾಡಲು ಜಂಗಿನಕೊಪ್ಪ, ಮೂಡೂರ, ಅಜಗುಂಡಿಕೊಪ್ಪ ಗ್ರಾಮಗಳ 18ರಿಂದ 35 ವರ್ಷದೊಳಗಿನ ಶಾಲೆ ಬಿಟ್ಟ ಯುವತಿಯರು, ಮಹಿಳೆಯರನ್ನು ಸಮೀಕ್ಷೆ ಮಾಡಿ ಹೊಲಿಗೆ ತರಬೇತಿ ನೀಡಿ ಗಾರ್ಮೆಂಟ್ಸ್‌ಗೆ ಹೋಗುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಯೋಜಕ ಕೆ.ಎಫ್. ನಾಯ್ಕರ್, ಪುಸ್ತಕದಲ್ಲಿ ಇರುವ ಶಿಕ್ಷಣ ಕೈ ಬಿಟ್ಟರೂ ಕಲಿತ ಕೌಶಲ್ಯ ಭವಿಷ್ಯದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ. ಯುವತಿಯರು ಶಿಕ್ಷಣ ನಿಲ್ಲಿಸಿದ ತಕ್ಷಣ ನಿರುದ್ಯೋಗಿ ಎಂಬ ಭಾವನೆಯಿಂದ ತಮ್ಮನ್ನು ತಾವೇ ನಿರುದ್ಯೋಗಿಗಳಂತೆ ಅಂದುಕೊಂಡು ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಕಂಪ್ಯೂಟರ್ ಕಲಿಕೆ, ಕಸೂತಿ, ಎಮರೈಡಿಂಗ್‌ ಅಂತಹ ಪ್ರಚಲಿತ ಇರುವ ಪ್ರಮುಖ ಕೌಶಲ್ಯಗಳನ್ನು ಕಲಿತು ಆದಾಯ ಗಳಿಸುವುದರಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಪಾಲಕರು ಮಕ್ಕಳ ಆಸಕ್ತಿ ಗಮನದಲ್ಲಿ ಇಟ್ಟುಕೊಂಡು ಆರ್ಥಿಕ ಅಭಿವೃದ್ಧಿ ಮತ್ತು ಕುಟುಂಬದ ಹಿತಕ್ಕಾಗಿ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.

ಹಳ್ಳಿ ಅಭಿವೃದ್ಧಿ ಸಮಿತಿ ಸದಸ್ಯ ಪರಮೇಶ ಚೌಟಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಅನುಕೂಲಗಳು ಇಲ್ಲದೆ ನಗರಕ್ಕೆ ಹೋಗಿ ಕಲಿಯಲು ಹೆಣ್ಣು ಮಕ್ಕಳು ಹಿಂದೇಟು ಹಾಕುವುದು ವಾಸ್ತವ ಸ್ಥಿತಿ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಆಗಲಿ ಎಂದು ಕೌಶಲ್ಯ ತರಬೇತಿ ಕೇಂದ್ರಗಳನ್ನು ಹಳ್ಳಿಗಳಲ್ಲಿ ಪ್ರಾರಂಭಿಸುತ್ತಿರುವುದು ಉತ್ತಮ ವಿಚಾರವಾಗಿದೆ. ಆದ್ದರಿಂದ ಎಲ್ಲರೂ ಇದರ ಉಪಯೋಗ ಪಡೆದುಕೊಂಡು ವಲಸೆ ಹೋಗದೆ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯೆ ನೀಲಮ್ಮ ಹೊಸವಡ್ಡರ, ಗ್ರಾಪಂ ಮಾಜಿ ಸದಸ್ಯ ವಿರೂಪಾಕ್ಷ ಹಿರೂರ, ಮಹಿಳಾ ಸ್ವ ಸಹಾಯ ಸಂಘದ ಹಿರಿಯರಾದ ಶಿವಗಂಗಮ್ಮ ಕಾಡನವರ, ಆಶಾ ಕಾರ್ಯಕರ್ತೆ ಶೋಭಾ ಮಟಗದ್ದಿ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಪ್ರತಿಭಾ ಆರಾಧ್ಯಮಠ, ಪ್ರಿಯಾ ತೋಟದ, ಸುಮಂಗಲಾ ಬಡಿಗೇರ ಇದ್ದರು.