ಸಾರಾಂಶ
ಬ್ರಹ್ಮಶ್ರೀ ನಾರಾಯಣಗುರುಗಳ 170 ನೆಯ ಜಯಂತ್ಯೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮನುಕುಲದ ಉಳಿವಿಗಾಗಿ ನಾರಾಯಣ ಗುರೂಜೀ ನೀಡಿದ ಮೂರು ಅಸ್ತ್ರಗಳೇ ಶಿಕ್ಷಣ, ಸಂಘಟನೆ, ಸಂಸ್ಕಾರ ಎಂದು ನಿಟ್ಟೂರು ಶ್ರೀ ನಾರಾಯಣಗುರು ಮಹಾ ಸಂಸ್ಥಾನದ ಅಧ್ಯಕ್ಷ ಶ್ರೀ ಆರ್ಯರೇಣುಕಾನಂದ ಸ್ವಾಮೀಜಿ ನುಡಿದರು.
ಜಿಲ್ಲಾ ಶ್ರೀನಾರಾಯಣ ಗುರು ಸಮಿತಿ ಉಪ್ಪಳ್ಳಿಯ ಹೆರಿಟೇಜ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ’ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೆ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಿವರು. ಇವರ ತತ್ತ್ವಾದರ್ಶಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಭಕ್ತಿ ಮತ್ತು ಶ್ರದ್ಧೆ ಕಲಿಸಿ ಜನರನ್ನು ಧರ್ಮ ಮಾರ್ಗದಲ್ಲಿ ನಡೆಸಲು ಇವರು ಸಹಕಾರಿ. ಸಮಾಜದ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಧ್ವನಿಯನ್ನು ಸಮಾಜಕ್ಕೆ ಕೊಡುವವರರನ್ನೆ ನಾಯಕನಾಗಿ ಸಮಾಜವೂ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು. ಇಂದು ವೇಷಭೂಷಣ, ಆಚರಣೆ, ಆಸಕ್ತಿ, ಸಂಭ್ರಮ, ಸಂತೋಷ ತಂದಿದೆ. ಕೇರಳ ರಾಜ್ಯಕ್ಕೆ ಹೋಗಿ ಬಂದ ಅನುಭವವನ್ನು ತಂದುಕೊಟ್ಟಿದೆ. ಸಂಸ್ಕೃತಿ, ಆಚಾರ, ವಿಚಾರ ಮುಂದಿನ ಪೀಳಿಗೆಗೆ ತಿಳಿಸಲು ಜಯಂತ್ಯುತ್ಸವ ಸಹಕಾರಿ ಎಂದು ಆರ್ಯ ರೇಣುಕಾನಂದ ಸ್ವಾಮೀಜಿ ನುಡಿದರು.ಬಸವತತ್ತ್ವ ಪೀಠದ ಅಧ್ಯಕ್ಷ ಡಾ.ಮರುಳುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ನಿರ್ಲಕ್ಷ್ಯಿಸಲ್ಪಟ್ಟ ತಳ ಸಮುದಾಯದಲ್ಲಿ ಸ್ವಾಭಿಮಾನ ಮೂಡಿಸಿದ ನಾರಾಯಣಗುರುಗಳದ್ದು ಚುಂಬಕಶಕ್ತಿ. ಅಕ್ಷರಜ್ಞಾನ ತುಂಬಿ ಪ್ರಬಲ ಸಮುದಾಯವಾಗಿ ಬೆಳೆಸುವ ಕೆಲಸ ಮಾಡಿದವರು. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದವರನ್ನೆ ಬದಿಗಿರಿಸಿ ತಾವೇ ಸ್ವತಂತ್ರ ದೇವಸ್ಥಾನ ನಿರ್ಮಿಸಿಕೊಂಡು ಧಾರ್ಮಿಕವಾಗಿ ಸ್ವಾಭಿಮಾನ ಮೂಡಿಸಿದವರೆಂದು ನುಡಿದರು.ಪ್ರತಿ ಸಮುದಾಯದಲ್ಲೂ ಒಳಪಂಗಡಗಳು ಸಹಜ. ಅವೆಲ್ಲವೂ ಒಗ್ಗಟ್ಟಾದರೆ ಮಾತ್ರ ಎಲ್ಲ ರಂಗದಲ್ಲೂ ಸೂಕ್ತ ಪ್ರಾತಿನಿಧ್ಯ ಪಡೆಯಲು ಸಾಧ್ಯ. ಈಡಿಗ, ಬಿಲ್ಲವ, ಈಳವ, ಪೂಜಾರಿ, ನಾಯ್ಕ ಇತ್ಯಾದಿ ಪ್ರಾದೇಶಿಕ ಕಾರಣಗಳಿಂದ ಕೆಲವು ಆಚರಣೆಗಳಿಂದ ಬೇರೆ ಬೇರೆ ಹೆಸರುಗಳಿದ್ದರೂ ಎಲ್ಲರಿಗೂ ಒಬ್ಬರೇ ಗುರು. ದೊಡ್ಡ ಆಲದ ಮರದಂತಿರುವ ನಾರಾಯಣಗುರುಗಳ ತತ್ತ್ವದೊಂದಿಗೆ ಸಂಘಟಿತರಾದರೆ ಒಳಿತಿದೆ ಎಂದು ತಿಳಿಸಿದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, 12ನೆಯ ಶತಮಾನದಲ್ಲಿ ಬಸವಾದಿ ಶರಣರು ಶೋಷಿತರನ್ನು ಒಟ್ಟುಗೂಡಿಸಿ ಬೆಳಕು ನೀಡಿದಂತೆ, ನಾರಾಯಣಗುರುಗಳೂ ಸಮಾಜದ ಕೆಡುಕನ್ನು ತೊಡೆದು ಬೆಳಕು ತೋರುವಲ್ಲಿ ಶ್ರಮಿಸಿದವರು. ಈಡಿಗ, ಈಳವ ಸಣ್ಣ ಸಮಾಜವಾದರೂ ಸಮರ್ಥ ನಾಯಕತ್ವನ್ನು ರಾಜ್ಯಕ್ಕೆ ನೀಡಿದ ಉದಾಹರಣೆ ಇದೆ. ಹಿಂದೆ ಸರ್ಕಾರವನ್ನು ಉಳಿಸುವ. ಉರುಳಿಸುವ ಸಾಮರ್ಥ್ಯವನ್ನೂ ಒಂದು ಕಾಲದಲ್ಲಿ ಹೊಂದಿತ್ತೆಂದರು.ಪುಟ್ಟ ಸಮಾಜಕ್ಕೆ ಶಕ್ತಿತುಂಬುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಈ ಸಮುದಾಯದ ತಲಾ ಓರ್ವರಿಗೆ ಸಿಡಿಎ, ಆಶ್ರಯ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 5 ಗ್ಯಾರಂಟಿಗಳ ಕಲ್ಯಾಣ ಕಾರ್‍ಯಕ್ರಮದಿಂದ ಸಂಘದ ಕಟ್ಟಡಕ್ಕೆ ವಿಶೇಷ ಅನುದಾನ ತರುವುದು ಸದ್ಯಕ್ಕೆ ಕಷ್ಟ. ಮುಂದೆ ಪ್ರಯತ್ನಿಸಬಹುದು ಎಂದ ಶಾಸಕ ಎಚ್.ಡಿ.ತಮ್ಮಯ್ಯ, ಸಂಘದ ಸ್ವಂತ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಮೊದಲ ಕಂತಾಗಿ ₹10 ಲಕ್ಷ ಗಳನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ನಾರಾಯಣ ಗುರುಗಳು ಹಿಂದೂ ಸಮಾಜದ ಲೋಪ ದೋಷಗಳನ್ನು ತೊಡೆದು ಶುದ್ಧೀಕರಣ ಗೊಳಿಸುವ ಮಹತ್ವದ ಕೆಲಸ ಮಾಡಿದ್ದಾರೆಂದರು.ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಅಧ್ಯಕ್ಷ ದಾಸರಹಳ್ಳಿ ಎಂ.ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್, ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿದರು. ಸಂಘದ ಕಾರ್‍ಯದರ್ಶಿ ಶ್ರೀನಿವಾಸ ಮಾಯಪ್ಪನ್ ನಿರೂಪಿಸಿದರು. ಖಜಾಂಚಿ ಸುರೇಶ್, ಪದಾಧಿಕಾರಿಗಳಾದ ಶಾಂತಕುಮಾರ್, ಕುಂಜಪ್ಪ, ಗುಣಶೇಖರ್, ಜಯಪ್ರಕಾಶ್, ಭಾಸ್ಕರ್, ಮಂಜುನಾಥ್ ಉಪಸ್ಥಿತರಿದ್ದರು. ಪ್ರತಿಭಾವಂತರನ್ನು ಮತ್ತು ದಾನಿಗಳನ್ನು ಸ್ವಾಮೀಜಿಗಳು ಸನ್ಮಾನಿಸಿದರು.
22 ಕೆಸಿಕೆಎಂ 7ಚಿಕ್ಕಮಗಳೂರಿನ ಉಪ್ಪಳ್ಳಿಯ ಹೆರಿಟೇಜ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ’ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವದಲ್ಲಿ ಶ್ರೀ ಆರ್ಯರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಮರುಳುಸಿದ್ದ ಸ್ವಾಮೀಜಿ, ಶಾಸಕ ಎಚ್.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಎಚ್.ಎಂ. ಸತೀಶ್ ಇದ್ದರು.