ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಸರ್ಕಾರದ ಅನೇಕ ಸೌಲಭ್ಯಗಳು ಹಾಗೂ ಮಾಗರ್ದಶನದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಹಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಇಂದು ಸಂಸ್ಕಾರ ಮತ್ತು ಸಾಮಾನ್ಯ ಜ್ಞಾನ ಕಲಿಸುತ್ತಿದ್ದಾರೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಂಜೀವಕುಮಾರ ಹಂಚಾಟೆ ಹೇಳಿದರು.ನಗರದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ (ಕಂಠಿಯವರ) ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಾವು ಒಂದನೇ ತರಗತಿಯಿಂದ ಹತ್ತನೇ ತರಗತಿಯವರಿಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಅನೇಕ ಗಣ್ಯರು ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎನ್ನುತ್ತಾ ತಮ್ಮ ಬಾಲ್ಯದ ಮಧುರ ನೆನಪುಗಳನ್ನು ಹಂಚಿಕೊಂಡರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ, ಶಿಕ್ಷಣ ಕಲಿಸಿದಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಉದಾತ್ತ ಚಿಂತನೆ, ಮೌಲ್ಯಗಳ ಮಹತ್ವವನ್ನು ಪಾಲಕರು ಮಕ್ಕಳಲ್ಲಿ ತುಂಬಬೇಕೆಂದು ನ್ಯಾ.ಹಂಚಾಟೆ ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಸಮಾರೋಪ ಮಾತುಗಳಲ್ಲಿ ಶಿಕ್ಷಣ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಶಾಸಕರ ಮಾದರಿ ಶಾಲೆಯ ಅಭಿವೃದ್ಧಿ ಕೆಲಸಕ್ಕೆ ₹೫೩ ಲಕ್ಷ ಅನುದಾನ ನೀಡಿ ಈ ವರ್ಷದಲ್ಲಿ ಕೆಲಸ ಪ್ರಾರಂಭಿಸುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿ, ಕಲಿಕೆಯಲ್ಲಿ ಉನ್ನತ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಇರಬಾರದು. ಇಲ್ಲಿ ಕಲಿತ ಹಂಚಾಟೆಯವರು ನ್ಯಾಯಮೂರ್ತಿಯಾಗಿದ್ದಾರೆ. ಅಧಿಕ ಅಂಕ ಪಡೆದ ಶಿಕ್ಷಕರು ಇಲ್ಲಿ ಕಲಿಸುತ್ತಾರೆ ಎಂದರು. ಶಿರೂರಿನ ಡಾ.ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ ಉಭಯ ಪೂಜ್ಯರು, ಶಾಸಕರನ್ನು, ನ್ಯಾಯಮೂರ್ತಿಗಳನ್ನು, ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ನಗರಸಭೆ ಸದಸ್ಯ ಅಮೃತ ಬಿಜ್ಜಲ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ಕ್ಷೇತ್ರ ಸಮಾನಾಧಿಕಾರಿ ಸದಾಶಿವ ಗುಡುಗುಂಟಿ, ಶಿಕ್ಷಣ ಸಂಯೋಜಕ ವಿನೋದ ಭೋವಿ, ನಿವೃತ್ತ ಶಿಕ್ಷಕ ಮಹಾಂತಪ್ಪ ಅಂಗಡಿ, ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ಧೋತ್ರ ದಂಪತಿಯನ್ನು ಸತ್ಕರಿಸಲಾಯಿತು.ಎಸ್.ಎಸ್. ಧೋತ್ರ ಪ್ರಾರ್ಥಿಸಿದರು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪ್ರಶಾಂತ ಹಂಚಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು, ನಿರೋಷಾ ಭೋವಿ ಮತ್ತು ಬಿ.ಎಸ್. ಬಂಡಿ ನಿರೂಪಿಸಿದರು. ಮುಖ್ಯಗುರು ಬಿ.ಎಂ. ಹೊರಗಿನಮಠ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.