ಸಾರಾಂಶ
- ಶಿವಯೋಗಾಶ್ರಮದಲ್ಲಿ ಶ್ರೀ ಜಯದೇವ ಜಗದ್ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಶತಮಾನಗಳ ಹಿಂದೆಯೇ ಜಯದೇವ ಜಗದ್ಗುರು ಅವರು ಪ್ರಸಾದ ನಿಲಯ ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಲಿಂಗೈಕ್ಯ ಜಯದೇವ ಜಗದ್ಗುರು ದೂರದೃಷ್ಟಿಯಿಂದಾಗಿ ಇಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿಗಳು ಇಂದು ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಧಕರಾಗಿ ಜೀವನ ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.ನಗರದ ಶಿವಯೋಗಾಶ್ರಮದಲ್ಲಿ ಮಂಗಳವಾರ ಶಿವಯೋಗಾಶ್ರಮ ಟ್ರಸ್ಟ್, ಬಸವ ಕೇಂದ್ರ ವಿರಕ್ತ ಮಠದಿಂದ ಶ್ರೀ ಜಯದೇವ ಜಗದ್ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವ ಅಂಗವಾಗಿ ಜಯದೇವ ಜಗದ್ಗುರು ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಜಯದೇವ ಶ್ರೀ ಜಯಂತ್ಯುತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು ಎಂದರು.
ಜಯದೇವ ಶ್ರೀಗಳು 1906 ರಲ್ಲಿ ಜಯದೇವ ಉಚಿತ ಪ್ರಸಾದ ನಿಲಯವನ್ನು ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಆರಂಭಿಸಿದರು. ಅನಂತರ ಬೆಂಗಳೂರು, ತುಮಕೂರು, ತಿಪಟೂರು, ಅರಸೀಕೆರೆ, ಕೊಲ್ಲಾಪುರ, ಧಾರವಾಡ, ನಿಪ್ಪಾಣಿ ಸೇರಿದಂತೆ ವಿವಿಧೆಡೆ ಪ್ರಸಾದ ನಿಲಯಗಳನ್ನು ಆರಂಭಿಸಿದರು. ಅಂದಿನಿಂದ ಇಂದಿಗೂ ಅವು ನಡೆಯುತ್ತಿವೆ. ಅಂತಹ ಗುರುಗಳು ಶಿಕ್ಷಣ ಕ್ರಾಂತಿ ಮಾಡದಿದ್ದಿದ್ದರೆ ಇವತ್ತು ದೇಶ, ರಾಜ್ಯ ಉದ್ಧಾರವಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ ಸೇರಿದಂತೆ ಅನೇಕ ರಾಜಕೀಯ ನಾಯಕರು, ಡಾ. ಜಿ.ಎಸ್. ಶಿವರುದ್ರಪ್ಪ ಅವರಂತಹ ಸಾಹಿತಿಗಳು ಶ್ರೀಗಳ ಪ್ರಸಾದ ನಿಲಯಗಳಲ್ಲಿ ಓದಿದ್ದಾರೆ. 1940ರಲ್ಲಿ ₹45 ಲಕ್ಷ ಬಜೆಟ್‌ನಲ್ಲಿ ಜಯದೇವ ಜಗದ್ಗುರು ₹18 ಲಕ್ಷಗಳನ್ನು ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗ ಮಾಡಿದ್ದಾರೆ ಎಂದು ತಿಳಿಸಿದರು.
ಲಿಂಗೈಕ್ಯ ಶ್ರೀಗಳು ಎಲ್ಲೆಲ್ಲಿ ಜಯದೇವ ಪ್ರಸಾದ ನಿಲಯ ಆರಂಭಿಸಿದ್ದಾರೋ ಅಲ್ಲಿ, ಮುರುಘಾ ಮಠದ ಶಾಲಾ- ಕಾಲೇಜುಗಳಲ್ಲಿ ಇಂದು ಶ್ರೀಗಳ ಭಕ್ತರು ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುತ್ತಿದೆ. ಜಯದೇವ ಶ್ರೀಗಳ ರಾಜಧಾನಿಯೆಂದರೆ ಅದು ದಾವಣಗೆರೆಯಾಗಿದೆ. ಎಲ್ಲರಿಗೂ ಶಿಕ್ಷಣ ದೊರಕುವಂತಾಗಲಿ, ಮಕ್ಕಳಿಗೆ ತೊಂದರೆ ಆಗುವುದು ಬೇಡವೆಂದು ಜಯದೇವ ಶ್ರೀಗಳು ಅಂದೇ ಪ್ರಸಾದ ನಿಲಯ ಸ್ಥಾಪಿಸಿದರು ಎಂದು ಹೇಳಿದರು.ಹೈಮಾಸ್ಟ್ ಲೈಟ್‌ನಂತೆ ಜಯದೇವ ಶ್ರೀಗಳು ಇಡೀ ಮಾನವ ಕುಲಕ್ಕೇ ಬೆಳಕಾಗಿದ್ದಾರೆ. ಎಲ್ಲರ ಬದುಕನ್ನು ಬೆಳಗಿಸುತ್ತಿದ್ದಾರೆ. ಜಯದೇವ ಶ್ರೀಗಳ ಸಮಾಜಮುಖಿ ಕಾರ್ಯಗಳಿಂದ ಬರೀ ದೇಶ ಅಲ್ಲ, ರಾಜ್ಯವೂ ಉದ್ದಾರವಾಗಿದೆ. ಎಲ್ಲರಿಗೂ ಶಿಕ್ಷಣ ಅನ್ನುವುದು ಸಿಕ್ಕಿದೆ. ಎಲ್ಲರೂ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯನ್ನು ಎಲ್ಲರೂ ಸ್ಮರಣೆ ಮಾಡೋಣ, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನೀವುಗಳು ಸಾಗೋಣ ಎಂದು ಬಸವ ಪ್ರಭು ಶ್ರೀಗಳು ಸಮಾಜಕ್ಕೆ ತಿಳಿಸಿದರು.
ಚಿತ್ರದುರ್ಗ ಬೃಹನ್ಮಠದ ಉತ್ತರಾಧಿಕಾರಿ ಬಸವಾದಿತ್ಯ ದೇವರು, ಹಾಸಬಾವಿ ಕರಿಬಸಪ್ಪ, ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಕಣಕುಪ್ಪಿ ಮುರುಗೇಶಪ್ಪ, ಎಂ.ಕೆ.ಬಕ್ಕಪ್ಪ, ಮುರುಘ ರಾಜೇಂದ್ರ ಚಿಗಟೇರಿ, ಲುಂಬಿ ಮುರುಗೇಶ, ಟಿ.ಎಂ. ವೀರೇಂದ್ರ, ಬೆಳ್ಳೂಡಿ ಮಂಜುನಾಥ, ಸಂಗಣ್ಣ, ಚಿಗಟೇರಿ ಜಯದೇವ, ಕೀರ್ತಿ, ಶರಣಪ್ಪ, ಚನ್ನಬಸವ ಶೀಲವಂತ್, ರೋಷನ್, ಶಿವಬಸಮ್ಮ, ಲತಾ, ಮುರುಘರಾಜೇಂದ್ರ ವಿದ್ಯಾವರ್ಧಕ ಫಂಡ್ ಸಂಘ, ಶಿವಯೋಗಾಶ್ರಮ ಟ್ರಸ್ಟ್, ವಿರಕ್ತ ಮಠ ಧರ್ಮದರ್ಶಿಗಳ ಸಮಿತಿ ಸದಸ್ಯರು, ಶ್ರೀಮಠದ ಭಕ್ತರು ಭಾಗವಹಿಸಿದ್ದರು.- - -
ಬಾಕ್ಸ್* ಗಾಂಧೀಜಿ-ಜಯದೇವ ಶ್ರೀ ಭೇಟಿ
ಮಹಾತ್ಮಾ ಗಾಂಧೀಜಿ ಒಮ್ಮೆ ಜಯದೇವ ಜಗದ್ಗುರು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ 12ನೇ ಶತಮಾನದಲ್ಲಿ ಬಸವಣ್ಣನವರು ಹೋರಾಟ ಮಾಡಿದ್ದರು. ಅಂತಹ ಕೆಲಸವನ್ನು ನೀವು ಮಾಡುತ್ತಿದ್ದೀರೆಂದು ಜಯದೇವ ಶ್ರೀಗಳು ಗಾಂಧೀಜಿ ಅವವರಿಗೆ ತಿಳಿಸಿದ್ದರಂತೆ. ನಂತರದಲ್ಲಿ ಅಸಹಕಾರ ಚಳವಳಿ ಮುಖಾಂತರ ಗಾಂಧೀಜಿ ಕರೆ ನೀಡಿದಂತೆ ಅಂದಿನಿಂದಲೇ ಜಯದೇವ ಜಗದ್ಗುರು ಕೂಡ ತಾವು ರೇಷ್ಮೆ ಬಟ್ಟೆ ತೊಡುವುದನ್ನು ಬಿಟ್ಟು, ಖಾದಿಬಟ್ಟೆಗೆ ಬಣ್ಣ ಹಾಕಿಕೊಂಡು, ತೊಡಲು ಆರಂಭಿಸಿದರು ಎಂದು ಬಸವಪ್ರಭು ಶ್ರೀಗಳು ಸ್ಮರಿಸಿದರು.- - - -27ಕೆಡಿವಿಜಿ1, 2:
ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ 150ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ, ಗಣ್ಯರು ಪಾಲ್ಗೊಂಡರು.