ಸಾರಾಂಶ
ಜೀವನ ಸಾಧನೆ ಬಹುಕಠಿಣ ಹೋರಾಟವಾಗಿರುತ್ತದೆ. ನಿತ್ಯ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಯಾರಲ್ಲಿ ಪ್ರಶ್ನಿಸುವ ಮನೋಧರ್ಮ ಬೆಳದಿರುತ್ತದೆಯೋ ಅವರು ಹೆಚ್ಚು ಗಳಿಸಬಹುದು. ಶಿಕ್ಷಕ ವೃತ್ತಿಗೆ ಭಾಷೆ ಶುದ್ಧತೆಯೇ ಪರಿಪೂರ್ಣ ಹಂತವಾಗಿದ್ದು, ಭಾಷೆ ಸುಧಾರಣೆ ಮತ್ತು ಪರಿಷ್ಕರಣಿಯೊಂದಿಗೆ ಮುನ್ನಡೆದರೆ ಗೌರವ ಹೆಚ್ಚಿಸಿಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಶಿಕ್ಷಣ ಕ್ಷೇತ್ರ ಮುತ್ತು ರತ್ನಗಳುಳ್ಳ ಸುಂದರ ಸರೋವರ. ಈ ಸರೋವರದಲ್ಲಿ ಎಷ್ಟು ಮಂದಿ ಮಿಂದುವರೋ, ಕೈ ತೊಳೆದು ಕೊಳ್ಳುವರೋ ಅಥವಾ ಸ್ಪರ್ಶಿಸುವರೋ ಅಷ್ಟೆ ಫಲ ಅವರಿಗೆ ಲಭಿಸುತ್ತದೆ ಎಂದು ಮಂಡ್ಯ ಶಂಕರಗೌಡ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಅಭಿಪ್ರಾಯಪಟ್ಟರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಬಿಇ.ಡಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮೌಲ್ಯಮಾಪನ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ ಪಾಲ್ಗೊಂಡು ರಚನಾತ್ಮಕ ಪ್ರಗತಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಜೀವನ ಸಾಧನೆ ಬಹುಕಠಿಣ ಹೋರಾಟವಾಗಿರುತ್ತದೆ. ನಿತ್ಯ ಪರಿಶ್ರಮದಿಂದ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಯಾರಲ್ಲಿ ಪ್ರಶ್ನಿಸುವ ಮನೋಧರ್ಮ ಬೆಳದಿರುತ್ತದೆಯೋ ಅವರು ಹೆಚ್ಚು ಗಳಿಸಬಹುದು. ಶಿಕ್ಷಕ ವೃತ್ತಿಗೆ ಭಾಷೆ ಶುದ್ಧತೆಯೇ ಪರಿಪೂರ್ಣ ಹಂತವಾಗಿದ್ದು, ಭಾಷೆ ಸುಧಾರಣೆ ಮತ್ತು ಪರಿಷ್ಕರಣಿಯೊಂದಿಗೆ ಮುನ್ನಡೆದರೆ ಗೌರವ ಹೆಚ್ಚಿಸಿಕೊಳ್ಳಬಹುದು ಎಂದರು.ಒಂದೇ ತಪ್ಪು ಪುನರಾವರ್ತನೆಯಾದರೆ ಅಜ್ಞಾನವಾಗುತ್ತದೆ. ಶಿಕ್ಷಕರು ವಿಷಯ ಸಂಪನ್ನರಾದರೆ ಮಾತ್ರ ವಿದ್ಯಾರ್ಥಿಗಳನ್ನು ತಲುಪಬಹುದು. ಹಾಗಾಗಿ ವಿಷಯ ಸಂಪಧೀಕರಣಕ್ಕೆ ಮಹತ್ವ ನೀಡಿ ಭವಿಷ್ಯದ ಪೀಳಿಗೆಯನ್ನು ಎತ್ತರಕ್ಕೆ ಕೊಂಡೊಯ್ಯಿರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ.ಶಿವರಾಮು ಮಾತನಾಡಿ, ಶಿಕ್ಷಣ ಸಮಾಜದ ಆತ್ಮ ಮತ್ತು ಆಸ್ತಿ ಇದ್ದಂತೆ. ಅರೆ ಬರೆ ತಿಳಿದವರು ಬೀಗುತ್ತಾರೆ. ಹೆಚ್ಚು ಅರಿತವರಿಗೆ ಮಾತ್ರ ಏನೇನು ತಿಳಿದಿಲ್ಲ ಎಂಬ ವಿನಂಬ್ರ ಭಾವನೆ ಇರುತ್ತದೆ. ವಿದ್ಯಾರ್ಥಿಗಳ ಏಳ್ಗೆಗೆ ಕಾಲೇಜು ಏಣಿ ಹಾಕಿದೆ, ಕ್ರಮವಾಗಿ ಹತ್ತುವ ಜ್ಞಾನದ ಕುಶಲಿಗಳಾಗುವುದು ಅಗತ್ಯವಿದೆ. ಅಧ್ಯಾಪಕರು ನೀಡುವ ಎಲ್ಲ ಜ್ಞಾನವನ್ನು ಗ್ರಹಿಸಿಕೊಂಡು ಸಾಮಾಜಿಕ ಜವಾಬ್ದಾರಿಯನ್ನೂ ಗಮನದಲ್ಲಿಟ್ಟುಕೊಂಡು ನಿಮ್ಮ ಅಧ್ಯಾಪನ ವೃತ್ತಿಯಲ್ಲಿ ಸಾರ್ಥಕವನ್ನು ಕಂಡುಕೊಳ್ಳಿ ಎಂದರು.ಚಿಕ್ಕಬಳ್ಳಾಪುರದ ಬಿಜಿಎಸ್ ಇಂಗ್ಲಿಷ ಸ್ಕೂಲ್‌ನ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿದರು. ಆಂತರಿಕ ಸದಸ್ಯರಾಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎನ್. ಶ್ರೀನಿವಾಸ್ ಹಾಜರಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮೌಲ್ಯಮಾಪನ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಹ ಪ್ರಾಧ್ಯಾಪಕರಾದ ಎ.ಎಚ್. ಗೋಪಾಲ್, ಸಿ.ಎಲ್. ಶಿವಣ್ಣ, ವಿ.ಲೋಕೇಶ್, ಎನ್.ಎಸ್. ಸೌಮ್ಯ, ಎ.ಸಿ. ದೇವಾನಂದ್, ಎಂ.ಶೋಭಾ, ರವಿಕುಮಾರ್, ರಾಜಶೇಖರ್ ಸೇರಿದಂತೆ ಹಲವರು ಇದ್ದರು.