ಕುಮಟಾ ತಾಲೂಕಿನ ಮಿರ್ಜಾನದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ''ಬಿಜಿಎಸ್ ಕಲಾ ಕಿರಣ'' ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು.

ಕುಮಟಾ: ವಿದ್ಯಾರ್ಥಿಗಳಿಗೆ ಪಠ್ಯಶಿಕ್ಷಣದ ಜತೆಗೆ ಕ್ರೀಡೆ, ಕಲೆ, ಸಾಹಿತ್ಯ ಇತ್ಯಾದಿ ಪಠ್ಯೇತರ ಚಟುವಟಿಕೆ ಅವಶ್ಯಕ. ಪಾಲಕರು ಮಕ್ಕಳ ಆಸಕ್ತಿ ಗುರುತಿಸಿ ಅಧ್ಯಯನ ಮಾಡಿಸಬೇಕು. ಒತ್ತಾಯಪೂರ್ವಕ ವಿಷಯ ಹೇರಿಕೆ ಸಲ್ಲ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ನುಡಿದರು.

ಮಿರ್ಜಾನದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ''ಬಿಜಿಎಸ್ ಕಲಾ ಕಿರಣ'' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆದಿಚುಂಚನಗಿರಿ ಮಠ ಪ್ರತಿವರ್ಷ ರಾಜ್ಯಮಟ್ಟದ ಕ್ರೀಡೋತ್ಸವ, ಕಲೋತ್ಸವ ಮತ್ತು ವಿಜ್ಞಾನೋತ್ಸವ ಸ್ಪರ್ಧೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯು ಶ್ರೇಷ್ಠ ಸಾಧನೆಯಾಗುವಂತೆ ಪೂರಕ ವಾತಾವರಣ ಕಲ್ಪಿಸಿ ಕೊಡುತ್ತಿದೆ ಎಂದರು.

ಡಿಎಫ್‌ಒ ಯೋಗೀಶ್ ಸಿ.ಕೆ. ಮಾತನಾಡಿ, ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಸದಾ ಕ್ರೀಯಾಶೀಲರಾಗುವಂತೆ ಮಾಡುವಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಹೊನ್ನಾವರ ತಾಪಂ ಇಒ ಪುಟ್ಟೇಗೌಡ ಮಾತನಾಡಿ, ಆದಿಚುಂಚನಗಿರಿ ಮಠವು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದರು.

ಗೋಕರ್ಣದ ವೇದಮೂರ್ತಿ ರಾಜಗೋಪಾಲ ಅಡಿ, ನಮ್ಮ ರಾಜ್ಯ, ದೇಶಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೇ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೀಡುತ್ತಿರುವ ಕೊಡುಗೆಗಳು ಅನನ್ಯವಾಗಿದೆ ಎಂದರು.

ಬಿಜಿಎಸ್ ಸ್ಕೂಲಿನಲ್ಲಿ ಓದಿರುವ ವೈದ್ಯಕೀಯ ಅಧ್ಯಯನನಿರತ ವಿದ್ಯಾರ್ಥಿಗಳನ್ನು ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ಸಿಬಿಎಸ್‌ಇ ೧೦ನೇ ತರಗತಿಯ ಉನ್ನತ ಶ್ರೇಯಾಂಕಿತರು, ರಾಜ್ಯಮಟ್ಟದ ಕ್ರೀಡೆ, ಚದುರಂಗ, ಕಲೆ, ಸಂಗೀತ, ಶ್ಲೋಕ ಪಠಣ ಮುಂತಾದವುಗಳಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸೃಜನಶೀಲತೆಯನ್ನೊಳಗೊಂಡ ''''''''ವಿದ್ಯಾಮೃತ'''''''' ಸ್ಮರಣ ಸಂಚಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯೆ ಅರ್ಚನಾ ಭಟ್, ಪಿಯು ಪ್ರಾಚಾರ್ಯೆ ರೇಷ್ಮಾ ಬಾಡ್ಕರ್ ವಾರ್ಷಿಕ ವರದಿ ವಾಚಿಸಿದರು. ಪಿಐ ಸಂಪತ್ ಕುಮಾರ್, ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್. ಭಟ್, ವಿಷ್ಣು ಪಟಗಾರ, ಗುರುರಾಜ್, ಗೋವಿಂದೇ ಗೌಡ, ಭಾಸ್ಕರ ಪಟಗಾರ, ವಿಜಯ್ ವಾಮನ್, ಎಂ.ಟಿ. ಗೌಡ ಇನ್ನಿತರರು ಉಪಸ್ಥಿತರಿದ್ದರು.

ಆದಿಶೇಷ ಸಂಗಡಿಗರು ವೇದಘೋಷಗೈದರು. ರಕ್ಷಾ ಸಂಗಡಿಗರು ನಾಡಗೀತೆ ಹಾಡಿದರು. ಪ್ರಜ್ವಲಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರೀತಿ ನಾಯ್ಕ ಸ್ವಾಗತಿಸಿದಳು. ಸಂಸ್ಕೃತ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಾರ್ಯಕ್ರಮ ನಿರೂಪಿಸಿದ ಪೃಥ್ವಿ ಪ್ರಭು, ಸೃಷ್ಟಿ ಪಟಗಾರ, ಲಿಖಿತಾ, ಆಲ್ಪಿಯಾ ಖಾನ್ ಗಮನ ಸೆಳೆದರು. ಕೃತಿಕಾ ವಂದಿಸಿದಳು. ವಿದ್ಯಾರ್ಥಿಗಳ ವೈವಿಧ್ಯಮಯ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ ಮನಸೂರೆಗೊಂಡಿತು.