ಸಾರಾಂಶ
ಬ್ಯಾಡಗಿ: ಶಿಕ್ಷಣವು ಜ್ವಲಂತ ಸಮಸ್ಯೆಗಳ ಸವಾಲು ಎದುರಿಸುವ ಸಾಧನವಾಗಬೇಕೆ ವಿನಃ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ದೌರ್ಬಲ್ಯವಾಗಬಾರದು. ದೇಶದ ಯುವಕರು ಸಂಪೂರ್ಣ ಶಿಕ್ಷಣವಂತರಾಗುವುದರಿಂದ ಭೂಮಿಯ ಮೇಲಿನ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ವರ್ತಕ ಕುಮಾರಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ಬಸವರಾಜ ಬಳ್ಳಾರಿ ಪೂರ್ವ ಪ್ರಾಥಮಿಕ ಶಾಲೆ, ಶ್ರೀಮತಿ ಸಿದ್ದಮ್ಮ ಮೈಲಾರ ಹಿರಿಯ ಪ್ರಾಥಮಿಕ ಶಾಲೆ, ವಿ.ಬಿ. ಕಳಸೂರಮಠ ಪ್ರೌಢಶಾಲೆ, ಶ್ರೀಮತಿ ಸುಶೀಲಮ್ಮ ಹಾವೇರಿಮಠ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಶಿಕ್ಷಣವು ಹಲವಾರು ಪಾತ್ರಗಳನ್ನು ವಹಿಸುತ್ತದೆ. ಹೊಸ ಕೌಶಲ್ಯಗಳನ್ನು ಕಲಿಸುವ ಹಾಗೂ ಪ್ರತಿಭೆಗಳನ್ನು ಗೌರವಿಸುವ ವೇದಿಕೆಯಾಗಿದ್ದು, ಅವರಲ್ಲಿರುವ ಸ್ವಯಂ-ಜ್ಞಾನ ಸ್ವಯಂ-ಅರಿವು ಹೆಚ್ಚಿಸುವ ಮೂಲಕ ವೈಯಕ್ತಿಕ ಅಭಿವೃದ್ಧಿ ಸೇರಿದಂತೆ ತಮ್ಮಲ್ಲಿರುವ ದೌರ್ಬಲ್ಯಗಳ ಬಗ್ಗೆ ಹೆಚ್ಚು ಹೊಂದಲು ಸಹಕರಿಸುತ್ತದೆ ಎಂದರು.
ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಶೈಕ್ಷಣಿಕ ದೌರ್ಬಲ್ಯತೆಗಳು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಂಠಿತಗೊಳ್ಳುವಂತೆ ಮಾಡುತ್ತದೆ, ಕಡಿಮೆ ಶಿಕ್ಷಣ ಪಡೆದವರು ಉದ್ಯೋಗಗಳನ್ನು ಹುಡುಕಿಕೊಳ್ಳಲು ಹರಸಾಹಸಪಡುವಂತಹ ಸಂದರ್ಭಗಳಿಗೆ ಕೊರತೆಯಿಲ್ಲ. ಶಿಕ್ಷಣವಂತರಿದ್ದ ಕುಟುಂಬವು ತನ್ನ ಸದಸ್ಯರನ್ನು ನೈತಿಕವಾಗಿ ಗಟ್ಟಿಗೊಳಿಸಲಿದೆ ಎಂದರು.ಮುಖಂಡ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಕೇವಲ ಆರ್ಥಿಕ ಸಂಪನ್ಮೂಲಗಳಿಂದ ಒಂದು ಪ್ರದೇಶದ ಅಭಿವೃದ್ಧಿಯಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಎಲ್ಲವೂ ಒಂದಕ್ಕೊಂದು ಅವಲಂಬಿತವಾಗಿರುತ್ತವೆ. ಹೀಗಾಗಿ ಮೋಟೆಬೆನ್ನೂರು ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದರು.
ಬಸವರಾಜ ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಜಯ ಬಳ್ಳಾರಿ ಅಶೋಕ ಬಣಕಾರ, ಮಲ್ಲಿಕಾರ್ಜುನ ವಿ, ಬಳ್ಳಾರಿ ಮೃತ್ಯುಂಜಯ ಪಿ. ಲಕ್ಕಣ್ಣನವರ, ಶಿವಪುತ್ರಪ್ಪ ಅಗಡಿ, ರೇವಣೆಪ್ಪ ದಿಡಗೂರ, ಎಸ್.ಎಂ. ಪಾಟೀಲ, ರಮೇಶ ಬಳ್ಳಾರಿ, ಯು.ಎಸ್. ರುದ್ರದೇವರಮಠ, ಎನ್.ಎಸ್.ಹಾವನೂರ, ಆರ್.ಆರ್.ಕುಂಠೆ, ಡಾ. ಪ್ರೇಮಾನಂದ ಲಕ್ಕಣ್ಣನವರ, ವಸಂತ ಕನ್ನಮ್ಮನವರ ಹಾಗೂ ಇನ್ನಿತರರಿದ್ದರು.