ಸಾರಾಂಶ
ನರಸಿಂಹರಾಜಪುರ, ಕೇವಲ ಅಂಕ ಗಳಿಕೆಯೇ ಶಿಕ್ಷಣವಾಗಬಾರದು. ಮಕ್ಕಳ ಜ್ಞಾನಾರ್ಜನೆಗೆ ಶಿಕ್ಷಣ ಕಲಿಸಬೇಕಾಗಿದೆ ಎಂದು ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕಣಿವೆ ವಿನಯ ಅಭಿಪ್ರಾಯ ಪಟ್ಟರು.
- ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೇವಲ ಅಂಕ ಗಳಿಕೆಯೇ ಶಿಕ್ಷಣವಾಗಬಾರದು. ಮಕ್ಕಳ ಜ್ಞಾನಾರ್ಜನೆಗೆ ಶಿಕ್ಷಣ ಕಲಿಸಬೇಕಾಗಿದೆ ಎಂದು ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕಣಿವೆ ವಿನಯ ಅಭಿಪ್ರಾಯ ಪಟ್ಟರು.
ಮಂಗಳವಾರ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಡಿ ತಾಲೂಕಿನಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿನ ಪ್ರಥಮ ಸ್ಥಾನ ಪಡೆದ ಕು.ಅಂಬಿಕಾ ಹಾಗೂ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಕು. ಸಾನ್ವಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಹಿಂದೆ ಮಕ್ಕಳಿಗೆ ಗುರುಕುಲದ ಪದ್ಧತಿ ಶಿಕ್ಷಣದ ಮೂಲಕ ಅನುಭವಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿತ್ತು. ಈಗ ಮಕ್ಕಳಿಗೆ ಅಂಕ ಜಾಸ್ತಿ ತೆಗೆಯುವುದೇ ಶಿಕ್ಷಣ ಎಂಬಂತಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದರೆ ಅವರು ದೇಶದ ಆಸ್ತಿಗಳಾಗುತ್ತಾರೆ. ಕಟ್ಟಿನಮನೆ ಇಬ್ಬರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಮುಂದೆ ಜೀವನದಲ್ಲೂ ಸಾಧನೆ ಮಾಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ರೋಟರಿ ಕ್ಲಬ್ ನ ಸದಸ್ಯ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ತಾಲೂಕು ಕೇಂದ್ರದಿಂದ ದೂರದಲ್ಲಿರುವ ಗ್ರಾಮೀಣ ಭಾಗದ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಸತತವಾಗಿ 3 ವರ್ಷದಿಂದ ಶೇ.100 ರಷ್ಟು ಫಲಿತಾಂಶ ಪಡೆದು ಕೊಂಡಿದೆ. ಅಲ್ಲದೆ ಎನ್.ಎಂ.ಎಂ.ಎಸ್ ಪ್ರತಿಭಾ ಪರೀಕ್ಷೆಯಲ್ಲೂ ಇದೇ ಶಾಲೆ 5 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಗೌಡ, ರೋಟರಿ ಸಂಸ್ಥೆ ಕಾರ್ಯದರ್ಶಿ ಮಧು, ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಲೋಕೇಶ್, ಸದಸ್ಯರಾದ ಪಿ.ಕೆ.ಬಸವರಾಜ್, ವಿಜಯಕುಮಾರ್, ಮನೋಜ್, ಗಿರೀಶ್ ಶೇಟ್ ಹಾಗೂ ಸಹ ಶಿಕ್ಷಕರು ಇದ್ದರು.