ಧಾರ್ಮಿಕ ಕಾರ್ಯದೊಂದಿಗೆ ಶಿಕ್ಷಣ, ಸಮಾಜಮುಖಿ ಕಾರ್ಯ

| Published : Feb 25 2024, 01:46 AM IST

ಸಾರಾಂಶ

ದೇಶದಲ್ಲಿ ಜೈನ ಸಮಾಜ ಅನಾದಿಕಾಲದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುವ ಮೂಲಕ ಸಾಮರಸ್ಯ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿಕೊಂಡು ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರುವ ದಿನಗಳಲ್ಲಿ ನಮ್ಮ ತಂಡ ಕ್ರಿಯಾಶೀಲವಾಗಿ ಕೆಲಸ ಮಾಡಿ, ಗಡಿ ಜಿಲ್ಲೆ ಯಾದಗಿರಿ ಹಾಗೂ ತೆಲಂಗಾಣ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ, ಸಮಾಜಮುಖಿ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಕಸ್ತೂರಿ ರಾಜಮೋಕ್ಷ ಆರಾಧನ ಟ್ರಸ್ಟ್ ಹಾಗೂ ಪಾರ್ಶ್ವ ಪದ್ಮಾವತಿ ಗೋಶಾಲಾ ಅಧ್ಯಕ್ಷ ಶರಣೀಕ್ ಕುಮಾರ ದೋಕಾ ಹೇಳಿದರು.

ಸೈದಾಪೂರ ಪಟ್ಟಣಕ್ಕೆ ಹತ್ತಿರವಿರುವ ಕುಣ್ಸಿ ಗ್ರಾಮದಲ್ಲಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥ ಮುನಿಗಳ ಮೂರ್ತಿ ಸ್ಥಾಪನೆ ಹಾಗೂ ಭವ್ಯ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಇಲ್ಲಿ ಗೋಶಾಲೆ ಇದೆ, ಹಸುಗಳ ಸಂರಕ್ಷಣೆ ಕಾರ್ಯ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು. ದೇಶದಲ್ಲಿ ಜೈನ ಸಮಾಜ ಅನಾದಿಕಾಲದಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುವ ಮೂಲಕ ಸಾಮರಸ್ಯ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಇಲ್ಲಿ ಬರುವ ದಿನಗಳಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಶಿಕ್ಷಣ ಸಂಸ್ಥೆ, ಹಾಗೂ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಯೋಜನೆಗಳನ್ನು ವಿವರಿಸಿದರು.

ಜೈನ ಮಠದ ಪೂಜ್ಯರಾದ ಆಚಾರ್ಯದೇವ ಶ್ರೀಮದ್ ವಿಜಯ ರಾಜತಿಲಕ ಸೂರೇಶ್ವರ, ವಿಫುಲ್ ರೇಖಾ ಸೂರೇಶ್ವರ ಸಮ್ಮುಖದಲ್ಲಿ ಪಾರ್ಶ್ವನಾಥರ ಮೂರ್ತಿ ಸ್ಥಾಪನೆ ಹಾಗೂ ಇನ್ನಿತರ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.

ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯರು, ಚೇಗುಂಟಾದ ಡಾ.ಕ್ಷೀರಲಿಂಗ ಸ್ವಾಮೀಜಿ, ನೇರಡಗುಂಬದ ಪಂಚಮಸಿದ್ಧಲಿಂಗ ಸ್ವಾಮೀಜಿ, ಯಾದಗಿರಿ ವೀರೇಶ್ವರ ಸ್ವಾಮೀಜಿ, ಮಕ್ತಲ್ ಶಾಸಕ ಶ್ರೀಹರಿ, ಟ್ರಸ್ಟ್‌ ಪ್ರಮುಖ ಪ್ರೇಮಚಂದ್ ದೋಕಾ, ಕಿಶೋರ ಸೇಠ್ ಸುರಪುರ, ಅಭಯಕುಮಾರ ದೋಕಾ, ಅಶೋಕಕುಮಾರ ಜೈನ್, ಸುರೇಶಕುಮಾರ ಜೈನ್, ಹನುಮಾನದಾಸ್ ಮುಂದಡ, ದಿನೇಶಕುಮಾರ ಜೈನ್, ಮೋಹನಲಾಲ್ ಸೋಲಂಕಿ, ಶಾಂತಿಲಾಲ್ ಹೈದ್ರಾಬಾದ್, ಯೋಗೇಶ ಕುಮಾರ ದೋಕಾ, ಮಹಿಪಾಲರಡ್ಡಿ ದುಪ್ಪಲ್ಲಿ ಸೇರಿ ಇತರರಿದ್ದರು.