ಬಿಜೆಪಿ ಮೇಲಿನ ಸೇಡಿಗಾಗಿ ಸರ್ಕಾರದಿಂದ ಶಿಕ್ಷಣ ವ್ಯವಸ್ಥೆ ಹಾಳು

| Published : May 22 2024, 12:48 AM IST

ಬಿಜೆಪಿ ಮೇಲಿನ ಸೇಡಿಗಾಗಿ ಸರ್ಕಾರದಿಂದ ಶಿಕ್ಷಣ ವ್ಯವಸ್ಥೆ ಹಾಳು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಠ್ಯಕ್ರಮ ರದ್ದು ಮಾಡ್ತಿವಿ ಅಂತ ಹೇಳಿದರು. ಶಿಕ್ಷಣ ಇಲಾಖೆಯಲ್ಲಿ ಪಠ್ಯಕ್ರಮದ ಕುರಿತು ರಾಜಕೀಯ ಹಸ್ತಕ್ಷೇಪ ಆಗಬಾರದು.

ಗದಗ: ಕಾಂಗ್ರೆಸ್‌ ಸರ್ಕಾರ, ಚಕ್ರವರ್ತಿ ಸೂಲಿಬೆಲೆ ಮೇಲಿನ ದ್ವೇಷದಿಂದ, ಬಿಜೆಪಿ ಮೇಲಿನ ಸೇಡಿನಿಂದ ಪಠ್ಯಕ್ರಮ ಬದಲಾಯಿಸಿದ್ದು ಸರಿಯಾದ ಕ್ರಮವಲ್ಲ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಖ್ಯಾತ ಚಿಂತಕ, ವಿದ್ವಾಂಸ ಚಕ್ರವರ್ತಿ ಸೂಲಿಬೆಲೆ ಬರೆದ ತಾಯಿ ಭಾರತೀಯ ಅಮರ ಪುತ್ರರು ಎಂಬ ಪಾಠದಲ್ಲಿ ಸ್ವಾತಂತ್ರ ಹೋರಾಟಗಾರರಾದ ರಾಜಗುರು, ಸುಖದೇವ್, ಭಗತ್ ಸಿಂಗ್ ಜೀವನ ಚರಿತ್ರೆ ಅಳವಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಪಾಠ ಕೈ ಬಿಟ್ಟಿತು. ಇಂತಹ ಮಹಾನ್ ನಾಯಕರ ಪಾಠಗಳನ್ನು ಬದಲಾವಣೆ ಮಾಡಿದ್ದು ಯಾಕೆ? ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಶಿಕ್ಷಣ ವ್ಯವಸ್ಥೆ ಹದಗೆಡಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಲಕ್ಷ ಮನೋಭಾವನೆ ಕಾರಣವಾಗಿದೆ. ಸರ್ಕಾರ ಎಡವಟ್ಟು ಮಾಡಿ ಸಾರ್ವಜನಿಕರ, ಶಿಕ್ಷಣ ತಜ್ಞರ ಟೀಕೆಗೆ ಗುರಿಯಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಪಠ್ಯಕ್ರಮ ರದ್ದು ಮಾಡ್ತಿವಿ ಅಂತ ಹೇಳಿದರು. ಶಿಕ್ಷಣ ಇಲಾಖೆಯಲ್ಲಿ ಪಠ್ಯಕ್ರಮದ ಕುರಿತು ರಾಜಕೀಯ ಹಸ್ತಕ್ಷೇಪ ಆಗಬಾರದು. 6ನೇ ತರಗತಿಯಿಂದ 8ನೇ ತರಗತಿಯವರೆಗಿನ ಕನ್ನಡ ಹಾಗೂ ಸಾಮಾನ್ಯ ವಿಜ್ಞಾನ ವಿಷಯದಲ್ಲಿ 9 ಪಾಠಗಳನ್ನು ರದ್ದು ಮಾಡಿ ಬದಲಾವಣೆ ಮಾಡಿದರು. ಪಠ್ಯ ಪುಸ್ತಕ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸಲಿಲ್ಲ. ಆದರೆ, ಕೇವಲ ಶಿಕ್ಷಕರಿಗೆ ಮಾತ್ರ ತಲುಪಿಸಿದರು. ಇದರಿಂದ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದ್ದು ದುರದುಷ್ಟಕರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅವಧಿಯಲ್ಲಿ ಕಸ್ತೂರಿ ರಂಗನ್ ಸಮಿತಿ ಮಾಡಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ತಳಹದಿ ಮೇಲೆ ಸಿದ್ದಪಡಿಸಿದ ಎನ್ ಇ ಪಿ ಜಾರಿಗೆ ತರಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಎನ್ ಇ ಪಿ ರದ್ದು ಮಾಡಿತು. ಶಿಕ್ಷಣ ವಿಷಯದಲ್ಲಿ ಜಗಳ ಯಾಕೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ರಾಜ್ಯಾದ್ಯಂತ ಸಿಬಿಎಸ್.ಸಿ, ಐ.ಸಿ.ಎಸ್.ಸಿ. ಶಾಲೆಗಳಲ್ಲಿ ಎನ್.ಇ.ಪಿ. ಜಾರಿಯಾಗುತ್ತಿವೆ. ಇದರಿಂದ ನಮ್ಮ ರಾಜ್ಯದಲ್ಲಿಯೇ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಯಿದ್ದು, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತದೆ ಎಂದು ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮೂರು ಪರೀಕ್ಷೆ ಮಾಡಿದರು. ಮೂರು ಪರೀಕ್ಷೆ ಮಾಡಿದ್ದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಗಂಭೀರತೆ, ಘನತೆ ಹೋಗಿದೆ. ಜುಲೈ ಕೊನೆಯ ತನಕ ಕೇವಲ ಪರೀಕ್ಷೆ ಬರೆಯುತ್ತಾ ಹೋಗಬೇಕು. ಇದರಿಂದ ಪಿಯುಸಿ ತರಗತಿಯ ಎರಡು ತಿಂಗಳ ಬೋಧನಾ ವ್ಯವಸ್ಥೆ ಮುಂದೆ ಹೋಗುತ್ತದೆ. ಮೂರು ಪರೀಕ್ಷೆ ಮಾಡಿ ಅಂತ ಸರ್ಕಾರಕ್ಕೆ ಯಾರು ಹೇಳಿದರು? ವಿದ್ಯಾರ್ಥಿಗಳು ಹೇಳಿದ್ರಾ, ಪಾಲಕರು ಹೇಳಿದ್ರಾ, ಇಲಾಖೆ ಹೇಳಿತ್ತಾ.? ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರ ಉತ್ತರ ಕೊಡಲಿ. ಈ ವ್ಯವಸ್ಥೆ ಸ್ಥಗಿತಗೊಳಿಸಿ ಹಳೆಯ ಪದ್ಧತಿ ಜಾರಿಗೋಳಿಸಬೇಕು ಸರ್ಕಾರಕ್ಕೆ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯದೇವ ಮೇಣಸಗಿ, ಪುನೀತ್ ಬೆನಕನವಾರಿ, ರವಿ ನರೇಗಲ್, ಹನಮಂತ ಹಳ್ಳೂರ, ಶಿವು ಜೋಗಿನ ಹಾಗೂ ಸೋಮು ಪಾಟೀಲ ಸೇರಿದಂತೆ ಅನೇಕರು ಇದ್ದರು.

ವೆಬ್ ಕಾಸ್ಟಿಂಗ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಗೆ ಮೂರು ಪರೀಕ್ಷೆ ಮಾಡಿದ್ದು ಸರಿಯಾದ ಕ್ರಮವಲ್ಲ. ರಾಜ್ಯದಲ್ಲಿ ಶೇ.43% ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಸರ್ಕಾರ ಶೇ.73% ಫಲಿತಾಂಶ ತೋರಿಸಿದ್ದು ಯಾಕೆ? ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.