ಬಸವತತ್ವ ಹಾಗೂ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪ್ರಸ್ತುತ ಶಿಕ್ಷಣ ವ್ಯವಸ್ಥೆ ಉದ್ಯೋಗ ಕೊಡಲಾಗದ ಸ್ಥಿತಿಗೆ ಬಂದು ಒಂದೊಂದೇ ವಿಶ್ವವಿದ್ಯಾಲಯ ಮುಚ್ಚುವ ಸಂದರ್ಭ ನಿರ್ಮಾಣವಾಗಲಿದ್ದು, ಅದಕ್ಕಾಗಿ ನೂತನ ಶಿಕ್ಷಣ ನೀತಿ, ಕೌಶಲ್ಯಾಭಿವೃದ್ಧಿಗೆ ಪೂರಕ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
ಸಖರಾಯಪಟ್ಟಣದ ಎಸ್‌ಕೆಎಸ್ ಸಭಾ ಭವನದಲ್ಲಿ ಸರ್ವ ಸಮಾಜದ ಪ್ರಮುಖರೊಂದಿಗೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಫೆ.27.28 ರಂದು ನಡೆಯಲಿರುವ ಬಸವತತ್ವ ಹಾಗೂ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಳೆದ 5 ವರ್ಷಗಳಲ್ಲಿ ಸಂಸ್ಥೆ ಕಟ್ಟಲಾಗದಿದ್ದರೂ ಸಂಸ್ಕೃತಿ ಕಟ್ಟುವ ಕಾಯಕ ಮಾಡುತ್ತಿರುವುದಾಗಿ ತಿಳಿಸಿದ ಶ್ರೀಗಳು, ತತ್ವಕ್ಕಾಗಿ, ಸಂಸ್ಕೃತಿಗಾಗಿ ರಾಜಕಾರಣಿಗಳು ಒಗ್ಗಟ್ಟಿನಿಂದ ಪಕ್ಷಬೇಧ ಮರೆತು ಮಠದ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.
ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಸಾಂಸ್ಕೃತಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸುತ್ತಿರುವುದು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಭೌತಿಕ ನಿರ್ಮಿತಿಗಳು ಎಲ್ಲಾ ರೀತಿಯ ಭಾವನೆ ತೊಡೆದುಹಾಕಲು ಬಹಳ ದೊಡ್ಡ ಪರಿಣಾಮ ಬೀರುತ್ತವೆ ಎಂಬುದು ನಮ್ಮ ಆಶಯ. ಈ ವರ್ಷ ಬಸವತತ್ವ ಸಮಾವೇಶ ಯಶಸ್ವಿಗೊಳಿಸಲು ಕೈಜೋಡಿಸಿ ಸಹಕರಿಸ ಬೇಕೆಂದು ಹೇಳಿದರು.
ಬಸವತತ್ವ ಪೀಠ ಮತ್ತು ಸಿರಿಗೆರೆ ಮಠ ಎಂದಿಗೂ ಮನಸ್ತಾಪ ಮಾಡಿಕೊಳ್ಳದೆ ತಾಂತ್ರಿಕವಾಗಿ ಎರಡೂ ಮಠ ಬೇರೆ ಬೇರೆ ಯಾದರೂ ತಾತ್ವಿಕವಾಗಿ, ಸಾಮಾಜಿಕವಾಗಿ ನಡೆಯುವ ಈ ಎರಡು ಮಠಗಳು ಬಸವತತ್ವಗಳನ್ನು ಹೇಳುವುದು ಒಂದೇಯಾಗಿದೆ ಎಂದರು.
ಸಂಘರ್ಷ, ಭಿನ್ನಾಭಿಪ್ರಾಯ ತಾತ್ವಿಕವಾಗಿದ್ದವು. ಆದರೆ, ವಯಕ್ತಿಕವಾಗಿ, ಸಾಮಾಜಿಕ ಹಿನ್ನೆಲೆಯಲ್ಲಿ ಇರಲಿಲ್ಲ ಎಂಬುದನ್ನು ಮನಗಾಣಬೇಕಿದೆ. ಐವತ್ತು ವರ್ಷಗಳ ಹಿಂದೆ ಸ್ಥಾಪಿತವಾದ ಬಸವತತ್ವ ಪೀಠ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬಹಳ ದೊಡ್ಡ ಕನಸುಗಳೊಂದಿಗೆ ಆರಂಭವಾಗಿದೆ ಎಂದು ತಿಳಿಸಿದರು.ಮಠದ ಜಯಚಂದ್ರಶೇಖರ ಶ್ರೀಗಳು ಕಿರಿಯ ವಯಸ್ಸಿನಲ್ಲೇ ದೇಹತ್ಯಾಗ ಮಾಡಿದರು. ಆದರೂ, ಅವರ ಆಚಾರ-ವಿಚಾರ, ಆಶಯಗಳು ಇಂದಿಗೂ ಮಠದ ಭಕ್ತರಲ್ಲಿ ನಿರಂತರವಾಗಿ ಜಾಗೃತವಾಗಿವೆ ಎಂಬುದಕ್ಕೆ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.
ಕೋವಿಡ್ ಸಂದರ್ಭದಲ್ಲಿ ಮಠದ ವತಿಯಿಂದ ಆಹಾರದ ಕಿಟ್ ವಿತರಣೆ, ಸಾವಿರ ನಾಗರಿಕರಿಗೆ ಕೋವ್ಯಾಕ್ಸಿನ್ ಚುಚ್ಚುಮದ್ದು ಕೊಡಿಸಿರುವುದು ದಾಖಲೆಯಾಗಿದ್ದು, ಸಾಂಸ್ಕೃತಿಕವಾಗಿ ಸಾಮೂಹಿಕ ವಚನಗಾಯನ, ಯಕ್ಷಗಾಯನ, ವಿವಿಧ ಶಿಬಿರಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದೆ ಎಂದರು.ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ಸುವರ್ಣ ಮಹೋತ್ಸವದ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮಹಡಿ ಮನೆ ಸತೀಶ್, ಮಾತನಾಡಿ, ಪ್ರತಿ ವರ್ಷದಂತೆ ಬಸವತತ್ವ ಸಮಾವೇಶ ರೂಪಿತವಾಗುತ್ತಿದ್ದು, ಇದರ ಸವಿನೆನಪಿ ಗಾಗಿ ಸಖರಾಯಪಟ್ಟಣದಲ್ಲಿ ಒಂದು ಸೂಕ್ತ ಭಾಗವನ್ನು ಗುರ್ತಿಸಿ, ಈ ಭಾಗದ ಭಕ್ತರಿಗೆ ಶ್ರೀಗಳ ಆಶೀರ್ವಾದ ಸದಾ ಸಿಗುವಂತಾಗಬೇಕು. ಜೊತೆಗೆ ನೆಮ್ಮೆಲ್ಲರ ಸಹಕಾರ ಅಗತ್ಯ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಸಿ. ಕಲ್ಮರುಡಪ್ಪ ಚಿದಾನಂದ, ಆನಂದನಾಯ್ಕ, ಬಿ.ಜಿ ಸೋಮಶೇಖರ್, ಮಂಜಣ್ಣ, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.ಪೋಟೋ
ಚಿಕ್ಕಮಗಳೂರಿನ ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಫೆ.27.28 ರಂದು ನಡೆಯಲಿರುವ ಬಸವತತ್ವ ಸಮಾವೇಶ ಹಾಗೂ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಶಾಸಕ ತಮ್ಮಯ್ಯ ಸೇರಿದಂತೆ ಮೊದಲಾದವರಿದ್ದರು.