ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಗಳಿಗೆ ಬೇಕಿರುವುದು ಗುಣಮಟ್ಟದ ಕೌಶಲ್ಯ ಜ್ಞಾನ ಹೆಚ್ಚಿಸುವ ಶಿಕ್ಷಣವೇ ಹೊರತು ಬೋಧನಾ ಶಿಕ್ಷಣವಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ನಗರದಲ್ಲಿರುವ ಕಾಳೇಗೌಡ ಶಾಲಾ ಆವರಣದಲ್ಲಿರುವ ಸಂತೋಷ್ ಪದವಿ ಪೂರ್ವ ಕಾಲೇಜು ಬಳಿ ಬದುಕು ಬೆಳಕು ಸೇವಾ ಸಮಿತಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ, ನಿವೃತ್ತ ಶಿಕ್ಷಕ ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ, ಸಂತೋಷ್ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿಜ್ಞಾನ- ವಾಣಿಜ್ಯ ವಿಭಾಗದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆ ಬಂತು, ನಾವು ಅಂದುಕೊಂಡಷ್ಟು ಬರಲಿಲ್ಲ ಎಂದು ವಿದ್ಯಾರ್ಥಿಗಳು ದೃತಿಗೆಡುವುದು ಬೇಡ, ಪೋಷಕರು ಆತಂಕ ಪಡುವುದೂ ಬೇಡ. ಯಾವುದೇ ಅನಾಹುತಕ್ಕೆ ಬಲಿಯಾಗುವುದೂ ಬೇಡ, ಪರೀಕ್ಷೆಗಳನ್ನು ಮತ್ತೊಮ್ಮೆ ಬರೆಯೋಣ, ಸಾಕಷ್ಟು ದಾರಿಗಳಿವೆ ಎಂದು ಕಿವಿಮಾತು ಹೇಳಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ಪ್ರಗತಿ ಕಾಣಲು ಶಿಕ್ಷಕ- ಉಪನ್ಯಾಸಕರ ಬೋಧನಾ ಶೈಲಿ ಮತ್ತು ವಿದ್ಯಾರ್ಥಿಗಳ ಪರಿಶ್ರಮ, ಕೌಶಲ್ಯತೆಯಿಂದ ಕೂಡಿರಬೇಕು ಎಂದರಲ್ಲದೇ, ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಸಂತೋಷ್ ಪಿಯು ಕಾಲೇಜಿನಂಥ ಶೇ.೧೦೦ರಷ್ಟು ಫಲಿತಾಂಶ ದಾಖಲಿಸುವ ಕಾಲೇಜುಗಳು ಇವೆ ಎಂದು ನುಡಿದರು.
ಶಿಕ್ಷಣದಿಂದ ಜ್ಞಾನ, ಕೌಶಲ್ಯತೆಯಿಂದ ಉದ್ಯೋಗ, ಆತ್ಮವಿಶ್ವಾಸದಿಂದ ಉದ್ಯಮ. ಹೀಗೆ ಸಾಕಷ್ಟು ದಾರಿಗಳಿವೆ. ಬದುಕುವ ಹಠಬೇಕು, ಸಾಧನೆ ಮಾಡುವ ಗುರಿ ಇರಿಸಿಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಎಂ.ಲೋಕೇಶ್, ಪ್ರಾಂಶುಪಾಲ ಸಂತೋಷ್, ಶಾಲೆಯ ಆಡಳಿತಾಧಿಕಾರಿ ಚಂದ್ರಪ್ರಭ, ಮುಖ್ಯಶಿಕ್ಷಕ ಗೋವಿಂದರಾಜ್, ಶಿಕ್ಷಕಿ ಜಯಲಕ್ಷಮ್ಮ ಮತ್ತಿತರರಿದ್ದರು.