ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿರುವ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸಮಗ್ರ ಬದುಕು ರೂಪಿಸುವ ಶಿಕ್ಷಣ ಸಿಗುತ್ತಿದೆ ಎಂದು ಚಿಕ್ಕಮಗಳೂರು ಬಸವತತ್ವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿರುವ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸಮಗ್ರ ಬದುಕು ರೂಪಿಸುವ ಶಿಕ್ಷಣ ಸಿಗುತ್ತಿದೆ ಎಂದು ಚಿಕ್ಕಮಗಳೂರು ಬಸವತತ್ವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದರು.ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಅಂಗವಾಗಿ ಬುಧವಾರ ಆಯೋಜನೆಗೊಂಡಿದ್ದ ತರಳಬಾಳು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ನೌಕರರ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಪಠ್ಯದ ಓದಿನ ಜೊತೆಗೆ ವ್ಯಕ್ತಿತ್ವ ರೂಪಿಸುವ ಕೆಲಸ, ಕಾಯಕ ಮೌಲ್ಯವನ್ನು ಅರಿಯುವ ಕೆಲಸ ನಿರಂತರವಾಗಿ ನಡೆಯುತ್ತದೆ. ಮಕ್ಕಳಲ್ಲಿ ಕಾಯಕದ ಶ್ರಮದಿಂದ ಬದುಕನ್ನು ಅರಿಯುವ ಕೆಲಸ ನಡೆಯುತ್ತಿದೆ. ಸಂಸ್ಥೆಗಳಲ್ಲಿ ವಚನಗಳ ಅಧ್ಯಯನವೂ ನಡೆಯುತ್ತಿದೆ, ಅವುಗಳನ್ನು ಸರಿಯಾಗಿ ಅರ್ಥಿಸಿಕೊಳ್ಳುವಂತೆ ಮಾಡಲು ವರ್ಷವೂ ವಚನ ಪರೀಕ್ಷೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಯಾವುದೇ ಒಂದು ದರ್ಶನಕ್ಕೆ ಇಲ್ಲವೇ ಧರ್ಮಕ್ಕೆ ಸೀಮಿತವಾದವರಲ್ಲ. ಅವರಿಗೆ ಜಗತ್ತಿನ ಎಲ್ಲ ದರ್ಶನಗಳ ಅರಿವೂ, ಧರ್ಮದ ತಿರುಳೂ ಗೊತ್ತಿದೆ. ಆದ್ದರಿಂದಲೇ ಅದರ ಮೂಲಕ ಅವರು ಮನುಷ್ಯನ ಮನದೊಳಗೆ ಅಡಗಿರುವ ಕಸವನ್ನು ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಒಂದು ಶಾಲೆಯನ್ನು ಉಳಿಸಿಕೊಳ್ಳಲು ಸೋಲುತ್ತಿರುವಾಗ ಹಿರಿಯ ಶಿವಕುಮಾರ ಶ್ರೀಗಳು 100 ಶಾಲೆಗಳನ್ನು ತೆರೆದು ಗೆದ್ದಿದ್ದಾರೆ. ಶ್ರೀಗಳ ಶಾಲೆಯಲ್ಲಿ ಬರೀ ಪಠ್ಯ ಅಲ್ಲ, ಕಾಯಕ, ದಾಸೋಹ, ಮೌಲ್ಯ, ಜೀವನದ ಪಾಠ, ವ್ಯಕ್ತಿತ್ವ ರೂಪಿಸುವ ಪಾಠ ಕಲಿತಿದ್ದೇವೆ. ಶಾಲೆಗಳಲ್ಲಿ ನಡೆಸುತ್ತಿರುವ ವಚನ ಪರೀಕ್ಷೆಗಳ ಮೂಲಕ ವಚನಗಳ ಸಾರ ಸಂದೇಶವನ್ನು ಮಕ್ಕಳಲ್ಲಿ ಮೂಡಿಸಲಾಗಿದೆ ಎಂದರು.*ಹಿರಿಯ ವಿದ್ಯಾರ್ಥಿಗಳು ತರಳಬಾಳು ಸಂತತಿ:
ಸಂಸ್ಥೆಯಲ್ಲಿ ಓದಿ ಉನ್ನತ ಸ್ಥಾನಮಾನಗಳಲ್ಲಿ ಇರುವ ಯುವಕರನ್ನು ಕಂಡು ಹೃದಯ ತುಂಬಿ ಬಂದಿದೆ. ಅವರೆಲ್ಲರೂ ತರಳಬಾಳು ಸಂತತಿಗೆ ಸೇರಿದ್ದಾರೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದ್ದಾರೆ. ಇವರ ಪ್ರೇರಣೆಯಿಂದ ವೇದಿಕೆಯ ಕೆಳಗೆ ಕುಳಿತಿರುವ ವಿದ್ಯಾರ್ಥಿಗಳು ಮುಂದೆ ಈ ವೇದಿಕೆಯ ಮೇಲೆ ಬಂದು ಕುಳಿತುಕೊಳ್ಳಬೇಕೆಂಬ ಅಪೇಕ್ಷೆ ತಮ್ಮದು ಎಂದರು.ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೆಲ್ಲರನ್ನು ಬೆಸೆಯಲು ಯುವಕರ ಒಕ್ಕೂಟವೊಂದರ ಅಗತ್ಯ ಇತ್ತು. ಈ ದಿನ ಬಿಡುಗಡೆ ಆಗಿರುವ ತಂತ್ರಾಂಶದ ಮೂಲಕ ಅದರ ಆಶಯ ಈಡೇರಿದೆ. ಇದರ ಮೂಲಕ ನಮ್ಮ ಸಂಸ್ಥೆಯ ಎಲ್ಲಾ ಯುವಕರು ಒಂದೆಡೆ ಸಿಗುತ್ತಾರೆ ಎಂದರು.
ಧರ್ಮಕ್ಕೆ ಜಾತಿ ಇಲ್ಲ:ಧರ್ಮವನ್ನು ಸರಿ ರೂಪದಲ್ಲಿ ಅರ್ಥೈಸಿಕೊಳ್ಳದೆ ಇರುವುದೇ ಹಲವು ಅನರ್ಥಕ್ಕೆ ಕಾರಣವಾಗಿದೆ. ಧರ್ಮಕ್ಕೆ ಜಾತಿ ಇಲ್ಲ ಎಂದು ಶ್ರೀಗಳು ತಿಳಿಸಿದರು.
ಅಮಿತ್ ನಾಗರಾಜ್ ರೂಪಿಸಿರುವ ತರಳಬಾಳು ಅಲುಮ್ನಿ ತಂತ್ರಾಂಶವನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿ ತಿಪ್ಪೇಸ್ವಾಮಿ ಬಿಡುಗಡೆ ಮಾಡಿದರು.ಅಜ್ಜಯ್ಯ, ಡಿಸಿಎಫ್, ಶಿರಸಿ, ಉತ್ತರ ಕನ್ನಡ ಜಿಲ್ಲೆ, ಕಾವ್ಯ ವೈ.ಎಸ್. ಐ.ಎಫ್.ಎಸ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಉತ್ತರ ಉಪ ವಿಭಾಗ, ಬೆಂಗಳೂರು, ಡಾ.ಬಿ.ವೈ.ಯುವರಾಜ, ಡೀನ್ ಮತ್ತು ನಿರ್ದೇಶಕರು, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಚಿತ್ರದುರ್ಗ, ಡಾ.ಎಲ್.ಪಿ.ರಾಜು, ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾಲಯ, ತುಮಕೂರು, ಎಸ್.ಎಂ.ನಾಗರಾಜ, ಜಿಲ್ಲಾ ಉಪ ರಕ್ಷಣಾಧಿಕಾರಿಗಳು, ದಾವಣಗೆರೆ ಡಾ.ಎ.ಎನ್.ಮನೋಜ್ ಕುಮಾರ್, ಕೀಲು ಮತ್ತು ಮೂಳೆ ತಜ್ಞರು, ಮಣಿಪಾಲ ಆಸ್ಪತ್ರೆ, ಬೆಂಗಳೂರು, ಡಾ.ಕೆ.ಬಿ.ಶ್ರೀಕಾಂತ, ಎಸ್.ಎಸ್.ಐ.ಎಂ.ಎಸ್ ಮತ್ತು ಆರ್.ಸಿ, ದಾವಣಗೆರೆ, ತಿಪ್ಪೇಸ್ವಾಮಿ, ವಿಶ್ರಾಂತ ಪ್ರಾಧ್ಯಾಪಕರು, ತೂಲಹಳ್ಳಿ, ಕೂಡ್ಲಿಗಿ ತಾಲೂಕು, ವಿಜಯನಗರ ಜಿಲ್ಲೆ, ಎಂ.ಪಿ.ಪವನ್ ಕುಮಾರ್, ಸಹ ಪ್ರಾಧ್ಯಾಪಕರು, ಜೆ.ಎನ್.ಎನ್.ಎಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ, ಸೈಯದ್ ಮೋಸಿನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊಸದುರ್ಗ, ಕೆ.ಬಿ.ಲೋಕೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕಾರಿಪುರ, ಡಾ.ಸುಧಾಕರ್ ಜೇಮ್ಸ್, ಮೈಸೂರು ಡಾ.ಡಿ.ಬಿ.ಆದರ್ಶ, ಉಪ ನಿರ್ದೇಶಕರು, ಎ.ಪಿ.ಎಂ.ಸಿ, ಬ್ಯಾಡಗಿ,
ಓ.ವಿರುಪಾಕ್ಷಪ್ಪ, ನಿವೃತ್ತ ಅಂಚೆ ಮುಖ್ಯ ಅಧೀಕ್ಷಕರು, ಧಾರವಾಡ, ಜಿ.ಬಿ.ಸೋಮಶೇಖರಪ್ಪ, ವಕೀಲರು, ಚಿತ್ರದುರ್ಗ, ಎಂ. ರುದ್ರಮುನಿ, ವಕೀಲರು, ಚಿತ್ರದುರ್ಗ, ಜಿ.ಎಂ. ಉಮಾಪತಿ, ವಕೀಲರು, ಚಿತ್ರದುರ್ಗ ಮುಂತಾದವರು ಭಾಗಿಯಾಗಿದ್ದರು.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ನಗದು ರೂಪದ ಬಹುಮಾನ ನೀಡಿ ಗೌರವಿಸಲಾಯಿತು.
ಎಚ್.ಎ.ವಿಶ್ವಕುಮಾರ್ ನಿರೂಪಿಸಿದರು. ಎಸ್.ಆರ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಕಾಶ್ ಬಣಕಾರ ವಂದಿಸಿದರು.