ಸಾರಾಂಶ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಸಜ್ಜಿತ ಕಟ್ಟಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಪುಸ್ತಕಗಳು ಎಲ್ಲವೂ ಇವೆ.
ಭಟ್ಕಳ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಸಜ್ಜಿತ ಕಟ್ಟಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಪುಸ್ತಕಗಳು ಎಲ್ಲವೂ ಇವೆ. ಆದರೆ ಮಕ್ಕಳಿಗೆ ಸಂಕಷ್ಟ ಬಂದಾಗ ಎದುರಿಸಿ ಬದುಕಲು ಕಲಿಸುವ ಜೀವನ ಶಿಕ್ಷಣ ಮತ್ತು ಮೌಲ್ಯಯುತ ಶಿಕ್ಷಣ ಮಾತ್ರ ಇಲ್ಲದಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ವೆಂಕಟರಮಣ ವಿ. ಭಟ್ ಹೇಳಿದರು.
ಅವರು ಪಟ್ಟಣದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಹೊಸ ವಿದ್ಯಾರ್ಥಿಗಳನ್ನು ಮಹಾ ವಿದ್ಯಾಲಯಕ್ಕೆ ಸ್ವಾಗತಿಸುವ ಆಗಮನ ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಖ್ಯಅತಿಥಿಯಾಗಿದ್ದ ಮುರ್ಡೇಶ್ವರದ ಆರ್.ಎನ್ ಎಸ್. ವಿದ್ಯಾನಿಕೇತನ ಪ್ರಾಂಶುಪಾಲೆ ಗೀತಾ ಕಿಣಿ ಮಾತನಾಡಿ, ಶಿಕ್ಷಕರಾಗುವವರು ಜ್ಞಾನದ ಜತೆಗೆ ತಾಳ್ಮೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ ಎಂದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅದ್ಯಕ್ಷ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಗುರುದತ್ತ ಶೇಟ್, ಪ್ರಾಂಶುಪಾಲ ಡಾ. ವೀರೇಂದ್ರ ವಿ ಶ್ಯಾನಭಾಗ ಮತ್ತು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಪಲ್ಲವಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ನೂತನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮೈನಾ ಸ್ವಾಗತಿಸಿದರು, ಅರ್ಚನಾ ವಂದಿಸಿದರು, ಪ್ರಿಯಾಂಕಾ ದೇವಾಡಿಗ, ಪೂಜಾ ಪ್ರಕಾಶ ಮತ್ತು ಪ್ರೇಮಾಕ್ಷ್ಕಿ ನಿರೂಪಿಸಿದರು.ಭಟ್ಕಳ ಜ್ಞಾನೇಶ್ವರಿ ಬಿಇಡಿ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೆ, ಪಠ್ಯೇತರ ಚಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.