ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ವಿದ್ಯಾರ್ಥಿಗಳ ಜೀವನ ಎಂಬುದು ಜೀವನ ಮಾರ್ಗದ ಮೈಲಿಗಲ್ಲು. ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿದ್ಯೆಯು ಜೀವನ ಪರ್ಯಂತ ಸಾಗಿ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಹಕಾರಿಯಾಗುತ್ತದೆ ಎಂದು ಕನ್ನಡ ಮತ್ತು ಕೊಡವ ಪ್ರಾದೇಶಿಕ ಚಲನಚಿತ್ರ ನಿರ್ದೇಶಕಿ ಕೊಟ್ಟು ಕತ್ತೀರ ಯಶೋಧ ಪ್ರಕಾಶ್ ಹೇಳಿದರು.ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಮತ್ತು 2023-24ನೇ ಸಾಲಿನ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೌಲ್ಯ ಆಧಾರಿತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಗುರು, ಹಿರಿಯರು, ಪೋಷಕರಿಗೆ ಗೌರವ ನೀಡುವುದು ಜೀವನದ ಒಂದು ಅಂಗವೆಂದು ಭಾವಿಸಬೇಕು. ಹಿಂದೆ ಘಟಿಸಿದ ಘಟನೆಗಳನ್ನು ಮರೆತು ಮುಂದೇ ನಡೆಯುದರ ಬಗ್ಗೆ ಚಿಂತಿಸಿದಲ್ಲಿ ಗುರಿ ತಲುಪುವಲ್ಲಿ ಸಫಲತೆಯನ್ನು ಕಾಣುವಿರಿ. ವಿದ್ಯೆಗೆ ಎಂದೂ ಅಂಕಿತವಿಲ್ಲಾ ಆದರೆ ಸಮಾಜದಿಂದ ಕಲಿಯುವುದನ್ನು ರೂಡಿಸಿಕೊಳ್ಳಬೇಕು. ಪಠ್ಯಗಳಲ್ಲಿ ಮುದ್ರಿತವಾದ ವಿಷಯಗಳನ್ನು ಕಲಿಯುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಕಲಿಕೆಯನ್ನು ಕಲಿಯುವಂತಾಗಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕುಂಬೇರ ಮನು ಕುಮಾರ್, ವಿದ್ಯಾರ್ಥಿ ಜೀವನ ಸಾಮಾಜಿಕ ಜೀವನದ ಮೈಲಿಗಲ್ಲಿನಂತೆ. ಕಲಿಕೆಯು ನಮಗೆ ಪಠ್ಯಗಳಲ್ಲಿರುವ ವಿಷಯಗಳನ್ನು ಪ್ರಸ್ತುತಪಡಿಸುತ್ತದೆ. ಆದರೆ ಸಮಾಜದೊಂದಿಗೆ ಬೆರೆತು ಕಲಿಯುವ ವಿಷಯಗಳು ಸಮಾಜಿಕ ಜೀವನದಲ್ಲಿ ಹಲವು ಸಾಧನೆಗೆ ಪ್ರಚೋದನೆ ನೀಡುತ್ತದೆ. ಶಾಲಾ ಕಾಲೇಜುಗಳಲ್ಲಿ ಕಲಿತ ನಿರ್ದಿಷ್ಟವಾದ ವಸ್ತು ವಿಷಯಗಳಿಗೆ ತಕ್ಕದಾದ ನೌಕರಿ ದೊರಕಲು ಕಷ್ಟ ಸಾಧ್ಯ. ಕೌಶಲ್ಯಾಭಿವೃದ್ಧಿ ಕಲಿಕೆಯಿಂದ ಸ್ವತ: ಅಭಿವೃದ್ಧಿ ಹೊಂದಲು ಸಾದ್ಯ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಗ್ರಹಿಕೆಯನ್ನು ಉಳಿಸಿಕೊಳ್ಳುವುದು ರೂಡಿಸಿಕೊಳ್ಳಬೇಕು. ಕಾರಣ ಗ್ರಹಿಸಿ ಅರಿತ ವಿದ್ಯೆ ಜೀವನದ ಅಂತ್ಯದವರೆಗೂ ಸಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದಾಗಿ ಪೋಷಕರು, ರಕ್ತ ಸಂಬಂಧಿಗಳು, ಗುರುಗಳು ಸ್ನೇಹಿತರು ನಡುವೆ ಇರುವ ಬಾಂಧವ್ಯಗಳು ಇಂದು ಹಂತ ಹಂತವಾಗಿ ಕಡಿಮೆಯಾಗುತ್ತಾ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಮ್ಮ ಅವಶ್ಯಕತೆಗೆ ಮಾತ್ರ ಮೊಬೈಲ್ ಬಳಕೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಎಂ. ನಾಣಯ್ಯ ಅವರು 2023-24ನೇ ಸಾಲಿನ ಕಾಲೇಜಿನ ಶೈಕ್ಷಣಿಕ ವಾರ್ಷಿಕ ವರದಿಯನ್ನು ಕಾರ್ಯಕ್ರಮದ ಮುಂದಿಟ್ಟರು. ಕಾಲೇಜಿನ ಎನ್ಎಸ್ಎಸ್ ಎನ್.ಸಿ.ಸಿ. ಸಾಂಸ್ಕೃತಿಕ, ಕ್ರೀಡಾ, ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಸಾಧನೆ, ಕಾಲೇಜಿನ ಪ್ರಗತಿ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮತ್ತು ಕೊಡವ ಪ್ರಾದೇಶಿಕ ಚಲನಚಿತ್ರ ನಿರ್ದೇಶಕಿಯಾದ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿದರು. ಕಾಲೇಜಿನ 2023-24 ನೇ ಸಾಲಿನಲ್ಲಿ ಸಾಂಸ್ಕೃತಿಕ ಎನ್.ಸಿ.ಸಿ, ಎನ್.ಎಸ್.ಎಸ್ ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನಾಡು ದೇಶದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾವೇರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಎ.ಎಂ. ಡಯಾನ ಸೋಮಯ್ಯ, ವಿದ್ಯಾರ್ಥಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಲೀಲ್ ಬಿ, ಸಹ ಕಾರ್ಯದರ್ಶಿ ಮೊಹಮ್ಮದ್ ಅನಾಸ್ ಸಿ.ಎ, ಮತ್ತು ಹಸೀನಾ ಎಂ.ಎ, ಕ್ರೀಡಾ ಕಾರ್ಯದರ್ಶಿ ಪ್ರಣವ್ ಪಿ., ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ದೀಪು ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಎ.ಎಂ. ಡಾಯನ ಸೋಮಯ್ಯ ಸ್ವಾಗತಿಸಿದರು. ಉಪನ್ಯಾಸಕರಾದ ಅನುಪಮಾ ಸಿ.ಪಿ ಮತ್ತು ವಿದ್ಯಾರ್ಥಿಗಳಾದ ನಫೀಯ, ವರ್ಷ, ನಿರೂಪಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ದಿಕ್ಷೀತ್ ಅಕ್ಕಮ್ಮ ವಂದಿಸಿದರು.ಕಾವೇರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಉಪನ್ಯಾಸಕರು ವೃಂದ, ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.