ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.ಅವರು, ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷರ್ದಲ್ಲಿ ₹2.ಕೋಟಿಗಿಂತಲೂ ಹೆಚ್ಚಿನ ಹಣ ವಿನಿಯೋಗಿಸಿ ಬಿಎಡ್ ಮತ್ತು ಎಲ್‌ಎಲ್‌ಬಿ ಮಹಾವಿದ್ಯಾಲಯಗಳ ಕಟ್ಟಡವನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇಂದಿನ ಆಧುನಿಕ ಯುವ ಸಮುದಾಯಕ್ಕೆ ಬೇಕಾಗುವ ತಂತ್ರಜ್ಞಾನ ಸೌಲಭ್ಯ ವಿದ್ಯಾರ್ಥಿಗಳಿಗೆ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಳೆದ 36 ವರ್ಷಗಳ ಹಿಂದೆ ಲಕ್ಷ್ಮೀ ಎಜುಕೇಶನ್ ಟ್ರಸ್ಟನ್ನು ನನ್ನ ಅಜ್ಜ ಇಂದಿರಾ ಪ್ರೀಯದರ್ಶಿನಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣರಾವ ಜಾರಕಿಹೊಳಿ ಸ್ಥಾಪಿಸಿದರು. ವ್ಯಾಸಂಗದ ಜೊತೆ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಸೈಟ್ಸ್ ಮತ್ತು ಗೈಡ್ಸ್ ಹೀಗೆ ಹಲವು ವಿಭಿನ್ನ ರೀತಿಯ ತರಬೇತಿ ನೀಡಲಾಗುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ಧರ್ಮದ ಜೊತೆ ಶಿಕ್ಷಣವು ವ್ಯಾಪಾರೀಕರಣಗೊಂಡಿದೆ. ಇಂತಹ ಸನ್ನಿವೇಶದಲ್ಲಿ ನಾವು ಉತ್ತಮ ಶಿಕ್ಷಕರನ್ನು ನೇಮಿಸಿಕೊಂಡು ತಾಂತ್ರಿಕತೆ ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದರು.ಮುಖ್ಯ ಅತಿಥಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮಾತನಾಡಿ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇಂದಿನ ಸಮಾಜದಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಒಂದು ಮಗುವನ್ನು ಸಮಾಜದ ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಗೋಕಾಕ ನಗರದಲ್ಲಿ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನರ್ಸರಿಯಿಂದ ಪಾಲಿಟೆಕ್ನಿಕ್, ಬಿಎಡ್, ಬಿಬಿಎ, ಎಲ್‌ಎಲ್‌ಬಿವರೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವುದು ಹೆಮ್ಮೆಯ ವಿಷಯ ಎಂದರು.
ಗಂಗಾವತಿ ಪ್ರಾಣೇಶ, ಬಸವರಾಜ್ ಮಹಾಮನೆ ಹಾಗೂ ನರಸಿಂಹ ಜೋಷಿ ಅವರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು. ನಂತರ ಬಸವರಾಜ್ ಮಹಾಮನೆ, ನರಸಿಂಹ ಜೋಷಿ ಹಾಗೂ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವೈಸ್ ಚೇರಮನ್ ಸುವರ್ಣ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ, ನಿರ್ದೇಶಕ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಪ್ರಾಚಾರ್ಯ ಅರುಣ ಪೂಜೇರ, ಈಶ್ವರ್ ಪವಾರ್, ಅಡಿವೆಪ್ಪ ಪಾಟೀಲ್, ಗುರುರಾಜ ನಿಡೋಣಿ, ಎಚ್.ಎಸ್. ಅಡಿಬಟ್ಟಿ, ಎಚ್.ವಿ.ಪಾಗ್ನೀಸ್, ಪಿ.ವಿ. ಚಚಡಿ ಹಾಗೂ ಆರ್.ಎಂ ದೇಶಪಾಂಡೆ ಇದ್ದರು. ಎಸ್. ಬಿ. ಬೆಕ್ಕನ್ನವರ ನಿರೂಪಿಸಿದರು.