ಸಾರಾಂಶ
ಹನುಮಸಾಗರ: ಇಂದಿನ ಶಿಕ್ಷಣ ಸಂಸ್ಥೆಗಳು ಶೋಷಿತ ಸಮುದಾಯಗಳ ವಿಮೋಚನಾ ಕೇಂದ್ರವಾಗುವಂತೆ ಅಭಿವೃದ್ಧಿಪಡಿಸಬೇಕು. ಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶ್ರೇಷ್ಠ ಬದುಕಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ಸಮೀಪದ ಹೂಲಗೇರಾ ಗ್ರಾಮದ ಲುಂಬಿನಿ ಪಾರ್ಕ್ ನಲ್ಲಿ ಭಾನುವಾರ ಪ್ರಬುದ್ಧ ಭಾರತ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಮಹನೀಯರ ಆದರ್ಶಗಳನ್ನು ಎಲ್ಲರೂ ತಿಳಿಯಬೇಕು. ಬಲಾಢ್ಯರಿಂದ ಬಲಹೀನರನ್ನು ರಕ್ಷಣೆ ಮಾಡುವುದು ಪ್ರಜಾಪ್ರಭುತ್ವ. ಸಂವಿಧಾನದ ಮೌಲ್ಯಗಳನ್ನು ಆಳ ಅಧ್ಯಯನ ಮೂಲಕ ತಿಳಿದುಕೊಳ್ಳಬೇಕು. ಕೆಲ ಸಮುದಾಯದ ಸ್ವಾಮೀಜಿಗಳನ್ನು ದೇವಾಲಯಗಳಿಂದ ಹೊರ ಹಾಕಿ, ದೇವಸ್ಥಾನ ತೊಳೆದಿದ್ದಾರೆ. ಇದು ಸನಾತನವಾದ. ಇದು ಸಂವಿಧಾನ ವಿರೋಧಿ ಕಾರ್ಯ. ಜಾತಿ ಧರ್ಮ ಬೇಧ ಭಾವ ಬಿಟ್ಟು ಮಕ್ಕಳಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು ಎಂದರು.ಗಂಟೆ ಬಾರಿಸಿದರೆ, ಮೇಣದ ಬತ್ತಿ ಹಚ್ಚಿದರೆ ಕೋವಿಡ್ ಹೋಗಲ್ಲ. ಕೆಲವರು ತಮ್ಮ ಲಾಭಕ್ಕಾಗಿ ಕೆಲವರನ್ನು ಮೂಢನಂಬಿಕೆಗೆ ಬಲಿ ಕೊಡುತ್ತಿದ್ದಾರೆ. ಹಿಂದುಳಿದವರು ಜಾಗೃತರಾಗಬೇಕು. ಸಮುದಾಯದ ವಿದ್ಯಾವಂತರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ದೇಶದ ಸಂಪತ್ತು ಕೆಲವರ ಬಳಿ ಇದೆ. ಶೂದ್ರರ ಬಳಿ ಹಣ ಇರಬಾರದು ಎಂಬ ಉದ್ದೇಶದಿಂದ 500, 1000 ರುಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದರು. ದಲಿತರು ಜಾಗೃತರಾಗಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ವ್ಯಕ್ತಿಪೂಜೆ ಸರ್ವಾಧಿಕಾರಿಯನ್ನು ಸೃಷ್ಟಿ ಮಾಡುತ್ತಿದೆ. ಸರ್ವಾಧಿಕಾರ ಪ್ರಜಾಪ್ರಭುತ್ವ ನಾಶಪಡಿಸುತ್ತದೆ. ಸಂವಿಧಾನದ ಬಗ್ಗೆ ಕೆಲವರಿಗೆ ಅರಿವೇ ಇಲ್ಲ. ಪ್ರಾರಂಭ ಶೋಷಣೆ ನಿಲ್ಲುತ್ತಿಲ್ಲ. ಭಾರತದಲ್ಲಿ ಇರುವ ಮುಸ್ಲಿಮರು ಭಾರತೀಯರು ಅಲ್ಲವೇ? ಇದರಲ್ಲಿ ಒಲೈಸುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದರು.ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಅಂಬೇಡ್ಕರ್ ಹೋರಾಟದಿಂದ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ. ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ದೇವಾಲಯಗಳನ್ನು ನಿರ್ಮಿಸದೇ ಶಾಲಾ ಕಾಲೇಜು ನಿರ್ಮಾಣ ಮಾಡಿದರೆ ಸಮಾಜಕ್ಕೆ ಒಳ್ಳೆಯದು. ಮೌಢ್ಯ, ಕಂದಾಚಾರಗಳನ್ನು ಬಿಟ್ಟು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ಅಂಬೇಡ್ಕರ್ ಇಲ್ಲದೇ ಹೋಗಿದ್ದರೆ ಹಿಂದುಳಿದವರು ನಿರಂತರ ತುಳಿತಕ್ಕೆ ಒಳಗಾಗುತ್ತಾರೆ ಎಂದರು.ಇಲಕಲ್ ಚಿತ್ತರಗಿ ವಿಜಯಮಾಹಂತಶ್ವರ ಮಠದ ಗುರುಮಹಾಂತ ಶ್ರೀ ಮಾತನಾಡಿ, ದಲಿತರು ಉನ್ನತ ಹುದ್ದೆ ಅಲಂಕರಿಸಲು ಸಂವಿಧಾನ ಕಾರಣವಾಗಿದೆ ಎಂದರು.ಬೀದರ ಧಮ್ಮ ದರ್ಶನ ಭೂಮಿಯ ಬಂತೆ ಸಂಘಪಾಲ ಸ್ವಾಮೀಜಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕರಾದ ದೊಡ್ಡನಗೌಡ ಜಿ. ಪಾಟೀಲ, ಮಾಜಿ ಶಾಸಕ ರಾಜು ಆಲಗೂರ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಸಂಸ್ಥೆಯ ಅಧ್ಯಕ್ಷ ಆರ್.ಕೆ. ಬೇಗಾರ, ಉಪಾಧ್ಯಕ್ಷ ಚಂದ್ರಶೇಖರ ಆರ್.ತೊರವಿ, ಕಾರ್ಯದರ್ಶಿ ಸಿದ್ದಣ್ಣ ಆಮದಿಹಾಳ, ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ತೊಂಡಿಹಾಳ, ಮಂಜುನಾಥ ಹೊಸಮನಿ, ಗೀತಾ ಪ್ರಭಾಕರ, ಡಾ.ಮಲ್ಲಿಕಾರ್ಜುನ ಖಾನಾಪುರ ಇದ್ದರು.