ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ: ಬಂಥನಾಳದ ಸಂಗನಬಸವ ಮಹಾಶಿವಯೋಗಿಳು ಜೋಳಿಗೆ ಹಿಡಿದು ವಿಜಯಪುರ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆಯದಿದ್ದರೆ ವಿಜಯಪುರ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿಯುತ್ತಿತ್ತು. ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಸಂಗನಬಸವ ಮಹಾಶಿವಯೋಗಿಗಳ ಕೊಡುಗೆ ಬಹಳಷ್ಟಿದೆ. ಹೀಗಾಗಿ, ಭತಗುಣಕಿ ಗ್ರಾಮದಲ್ಲಿನ ಶೈಕ್ಷಣಿಕ ಸಂಸ್ಥೆಗೆ ಜಾಗ ದಾನ ಮಾಡಿದ ಸಂಭಾಜಿರಾವ ಮಿಸಾಳೆ ಅವರ ಶಿಕ್ಷಣ ಪ್ರೇಮ ಶ್ಲಾಘನೀಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ:
ಬಂಥನಾಳದ ಸಂಗನಬಸವ ಮಹಾಶಿವಯೋಗಿಳು ಜೋಳಿಗೆ ಹಿಡಿದು ವಿಜಯಪುರ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆಯದಿದ್ದರೆ ವಿಜಯಪುರ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿಯುತ್ತಿತ್ತು. ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಸಂಗನಬಸವ ಮಹಾಶಿವಯೋಗಿಗಳ ಕೊಡುಗೆ ಬಹಳಷ್ಟಿದೆ. ಹೀಗಾಗಿ, ಭತಗುಣಕಿ ಗ್ರಾಮದಲ್ಲಿನ ಶೈಕ್ಷಣಿಕ ಸಂಸ್ಥೆಗೆ ಜಾಗ ದಾನ ಮಾಡಿದ ಸಂಭಾಜಿರಾವ ಮಿಸಾಳೆ ಅವರ ಶಿಕ್ಷಣ ಪ್ರೇಮ ಶ್ಲಾಘನೀಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಡಿಭಾಗದಲ್ಲಿರುವ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ 1979 ರಲ್ಲಿ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಪಿಯುಸಿ ವಿಭಾಗ ಆರಂಭವಾಗುವ ಹಂತಕ್ಕೆ ತಲುಪಿದೆ. ಈ ಗ್ರಾಮದ ಶಿಕ್ಷಣ ಪ್ರೇಮಿಗಳ ಸಹಕಾರಕ್ಕೆ ಮೆಚ್ಚಲೆಬೇಕು. ಅಂದು ಶಿಕ್ಷಣ ಸಂಸ್ಥೆ ಕಟ್ಟಡ ಕಟ್ಟಲು ಭೂಮಿ ದಾನ ಮಾಡಿದ ಸಂಭಾಜಿರಾವ ಮಿಸಾಳೆ ಅವರ ಶಿಕ್ಷಣ ಪ್ರೇಮಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.
ಗಡಿ ಭಾಗದಲ್ಲಿರುವ ಇಂಡಿ ತಾಲೂಕು ಶೈಕ್ಷಣಿಕವಾಗಿ ಸರ್ವ ವಿಧದಲ್ಲಿಯೂ ಪ್ರಗತಿ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಝಳಕಿ ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಇಂಡಿ ಪಟ್ಟಣದ ವಿದ್ಯಾನಗರದಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕಟ್ಟಡ ನಿರ್ಮಿಸಿ ವಿದ್ಯಾಕಾಶಿಯನ್ನಾಗಿ ಮಾಡಲಾಗಿದೆ. ಮುಂಬರುವ ದಿನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತಾಲೂಕಿನಲ್ಲಿ ಆರಂಭಿಸಲು ಪ್ರಯತ್ನ ನಡೆದಿದೆ ಎಂಬ ಮಾಹಿತಿ ನೀಡಿದರು. ಅಲ್ಲದೇ, ಶಿಕ್ಷಣದಿಂದ ಸಮಾಜ, ವ್ಯಕ್ತಿ ಮತ್ತು ಪರಿಸರ ಬದಲಾವಣೆ ಮಾಡಲು ಸಾಧ್ಯ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕು ಎಂದು ಹೇಳಿದರು.ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿ, ನಾನು ಇಂಡಿ ಪಟ್ಟಣದಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನನ್ನ ಬಳಿ ಯಾವುದೇ ಕೆಲಸಗಳು ಇದ್ದರೂ ತಾವು ಬರಬೇಕು. ನನ್ನ ಕೈಲಾದಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.ಮಹಾಂತಯ್ಯ ಸ್ವಾಮಿ, ಸಿದ್ದರಾಮೇಶ್ವರ ಪಟ್ಟದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಬಿ.ಎಂ.ಕೊರೆ, ಸಂಬಾಜಿರಾವ ಮಿಸಾಳೆ, ರಾಜಪಾಲ ಚೌಹಾಣ್, ರುಕ್ಮುದ್ದೀನ್ ತದ್ದೇವಾಡಿ, ಬಸುಗೌಡ ಹಳಕೆ, ರಾಜಶೇಖರ ಕಾಡೆ, ಸಿದ್ದಾರಾಮ ನಿಚ್ಚಳ, ಶಿವಾಜಿ ಶಿಂಧೆ, ಸುರೇಶ ಜೇವರ್ಗಿ, ಶಿವಪುತ್ರ ಜೇವರ್ಗಿ, ಮುಖ್ಯಶಿಕ್ಷಕ ಆರ್.ಎಸ್.ಗುಂದವಾನ, ಸಾಹೇಬಗೌಡ ಬಿರಾದಾರ, ಸುಭಾಷ ಬಾಬರ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಜೀತ ಬಾಬರ ನಿರೂಪಿಸಿ ಹಾಗೂ ವಂದಿಸಿದರು.