ಸಾರಾಂಶ
ಚಿತ್ರದುರ್ಗ: ತಾಯಿ ಜೀಜಾಬಾಯಿ ಚಿಕ್ಕಂದಿನಲ್ಲಿಯೇ ಶಿವಾಜಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದ್ದರ ಫಲವಾಗಿ, ಛತ್ರಪತಿಯಾಗಿ ಶಿವಾಜಿ ದಕ್ಷ ಹಾಗೂ ಸಾಮರಸ್ಯದ ಆಡಳಿತ ನಡೆಸಲು ಸಾಧ್ಯವಾಯಿತು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ನಗರದ ತರಾಸು ರಂಗಮಂದಿರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ಸನಾತನ ಧರ್ಮದ ಪುನರುಜ್ಜೀವನದ ಜೊತೆಗೆ ರಾಷ್ಟ್ರಭಕ್ತಿ ಒಡಮೂಡಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣರಾಗಿದ್ದಾರೆ ಎಂದರು.ಇಂದಿನ ಪೋಷಕರು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಮಹನೀಯರನ್ನು ಯಾವುದೇ ರಾಜ್ಯ, ಭಾಷೆ ಹಾಗೂ ಜಾತಿಗೆ ಸೀಮಿತ ಮಾಡಬಾರದು. ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಮರಾಠ ಸಮುದಾಯದವರು ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಸಿ.ಗುರುಸ್ವಾಮಿ ಶಿವಾಜಿ ಕುರಿತು ಉಪನ್ಯಾಸ ನೀಡಿ, ಮುಸ್ಲಿಂ ಧರ್ಮದ ವಿರುದ್ಧವಾಗಿ ಶಿವಾಜಿ ಇರಲಿಲ್ಲ. ಶಿವಾಜಿಯ ತಂದೆ ಶಹಾಜಿ ಬೋಸ್ಲೆ ಬಿಜಾಪುರದ ಆದಿಲ್ ಷಾಹಿಗಳ ಆಡಳಿತದಲ್ಲಿ ಜಾಗೀರದಾರ್ ಆಗಿದ್ದರು. ಚಿಕ್ಕಂದಿನಿಂದಲೂ ಶಿವಾಜಿ ಮುಸ್ಲಿಂ ಆಡಳಿತಗಾರರ ದೌರ್ಜನ್ಯವನ್ನು ಕಣ್ಣಾರೆ ಕಂಡಿದ್ದರು. ಇದರ ವಿರುದ್ಧವಾಗಿ ಹೋರಾಟ ಆರಂಭಿಸಿದರು. ಶಿವಾಜಿ ಆರಂಭದ ದಿನಗಳಿಂದ ಹಿಡಿದು ಛತ್ರಪತಿಯಾಗಿ ಆಡಳಿತ ನಡೆಸುವವರೆಗೂ, ತಾಯಿ ಜೀಜಾಬಾಯಿ, ರಾಜತಾಂತ್ರಿಕ ಗುರು ದಾದಾಜಿ ಕೊಂಡದೇವ, ಆಧ್ಯಾತ್ಮಿಕ ಗುರು ರಾಮದಾಸ ಅವರು ಪ್ರೋತ್ಸಾಹ ನೀಡಿದ್ದರೆಂದರು.ಶಿವಾಜಿ ಧಾರ್ಮಿಕ ಸಹಿಷ್ಣು ಆಗಿದ್ದರು. ಇವರ ಧಾರ್ಮಿಕ ಔದಾರ್ಯಕ್ಕೆ ಹಲವು ನಿದರ್ಶನಗಳು ಇವೆ. ಇಸ್ಲಾಂ ಧಾರ್ಮಿಕ ಕೇಂದ್ರಗಳು, ಖುರಾನ್, ಮುಸ್ಲಿಂ ಸ್ತ್ರೀಯರೊಂದಿಗೆ ಗೌರವದಿಂದ ನಡೆದುಕೊಳ್ಳುವಂತೆ ಶಿವಾಜಿ ತನ್ನ ಸೈನಿಕರಿಗೆ ಕಟ್ಟಪ್ಪಣೆ ಮಾಡಿದ್ದರು. ಈ ಕುರಿತು ಆದಿಲ್ ಷಾಹಿ ಆಸ್ಥಾನದಲ್ಲಿದ್ದ ಬರಹಗಾರರೇ ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ಶಿವಾಜಿ ಹಿಂದೂ ಧರ್ಮದಲ್ಲಿನ ಎಲ್ಲಾ ಹಿಂದುಳಿದ ಜನಾಂಗಗಳ ನಾಯಕ ಎಂದು ಜ್ಯೋತಿ ಬಾ ಪುಲೆ ಶಿವಾಜಿಯನ್ನು ವ್ಯಾಖ್ಯಾನಿಸಿದ್ದಾರೆ. ಗೆರಿಲ್ಲಾ ಯುದ್ಧ ತಂತ್ರದಲ್ಲಿ ನಿಪುಣರಾಗಿದ್ದ ಶಿವಾಜಿ, ಔರಂಗಜೇಬನ ವಿರುದ್ಧ ಹೋರಾಟ ನಡೆಸಿ ಬಲಿಷ್ಠ ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಶಿವಾಜಿಗೆ ರಾಜ ಎಂದು ಬಿರುದು ನೀಡುವ ಮೂಲಕ ಔರಂಗಜೇಬ್ ಶಿವಾಜಿ ಆಡಳಿತವನ್ನು ಒಪ್ಪಿಕೊಂಡ ಎಂದು ಪ್ರಾಧ್ಯಾಪಕ ಡಾ.ಸಿ.ಗುರುಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸ್ವಾಗತಿಸಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಚಿತ್ರದುರ್ಗದ ಹಿಮಂತರಾಜು ಮತ್ತು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್ ರಾವ್ ಜಾಧವ್, ಕಾರ್ಯದರ್ಶಿ ಜೆ.ಗೋಪಾಲರಾವ್ ಜಾಧವ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಜಿ.ಉಷಾ ಬಾಯಿ ಹಾಗೂ ಮರಾಠ ಸಮಾಜದ ಯುವ ಮುಖಂಡ ನಿತಿನ್ ಜಾಧವ್, ಜಿಪಂ ಮಾಜಿ ಸದಸ್ಯ ಪಾಪಣ್ಣ ಸೇರಿದಂತೆ ಗಣ್ಯರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ನಗರದ ಬುರುಜನಹಟ್ಟಿ ವೃತ್ತದಿಂದ ತರಾಸು ರಂಗಮಂದಿರದವರೆಗೆ ಶಿವಾಜಿ ಪ್ರತಿಮೆಯ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಭವ್ಯವಾಗಿ ನಡೆಸಲಾಯಿತು. ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮೆರವಣಿಗೆಗೆ ಚಾಲನೆ ನೀಡಿದರು.