ಸಾರಾಂಶ
ಗದಗ: ಜಿಲ್ಲೆಯಲ್ಲಿ ಕೊಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಕೊಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಟ್ಪಾ-2003 ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಶಾಲಾ-ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಗಜದ ವರೆಗೆ ತಂಬಾಕು ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕಾನೂನು ರೀತಿ ಕ್ರಮ ಕೈಗೊಂಡು ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಎಲ್ಲ ಅಂಗಡಿ ಮುಂಗಟ್ಟುಗಳ ಮುಂದೆ ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿನ ತಂಬಾಕು ನಿಷೇಧ ಕುರಿತು ನಾಮಫಲಕ ಬಿತ್ತರಿಸಬೇಕು. ಅಂಗಡಿ ಮಾಲೀಕರ ಸ್ಥಳದ ಮುಖ್ಯಸ್ಥರ ಜವಾಬ್ದಾರಿಯೂ ಆಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವುದು ಹಾಗೂ ಇತರ ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಎನ್‌ಟಿಸಿಪಿ ಕಾರ್ಯಕ್ರಮಾಧಿಕಾರಿ ಡಾ. ವೆಂಕಟೇಶ ರಾಥೋಡ್ ಮಾತನಾಡಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ವಿವರಿಸುತ್ತಾ ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 100 ಶಾಲಾ-ಕಾಲೇಜುಗಳಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚನೆ ಮಾಡಲಾಗಿದೆ. ಕೋಟ್ಪಾ ದಾಳಿ ಹಮ್ಮಿಕೊಳ್ಳುವ ಮೂಲಕ ವ್ಯಾಪಾರಸ್ಥರು, ತಂಬಾಕು ಬಳಕೆದಾರರಿಗೆ ಹಾಗೂ ಸಾರ್ವಜನಿಕರಲ್ಲಿ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗಿದೆ. ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಂಡು ಈ ವರೆಗೆ 52 ಕೋಟ್ಪಾ ದಾಳಿ ನಡೆಸಿ 569 ಪ್ರಕರಣಗಳನ್ನು ದಾಖಲಿಸಿ ₹90,210 ದಂಡ ಸಂಗ್ರಹಿಸಲಾಗಿದೆ. ಕೋಟ್ಪಾ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಮೂಲಕ ಈ ವರ್ಷ ಒಟ್ಟು 1,777 ಅಭ್ಯರ್ಥಿಗಳಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಅದೆ ರೀತಿ ಸಮುದಾಯ ಮಟ್ಟದಲ್ಲಿ ಕೇಂದ್ರೀಕೃತ ಗುಂಪು ಚರ್ಚೆಯ ಮೂಲಕ ಒಟ್ಟು 48 ಎಫ್‌ಜಿಡಿ ಕಾರ್ಯಕ್ರಮ ಮಾಡಲಾಗಿದೆ ಎಂದು ವಿವರಿಸಿದರು.
ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆಯ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ. ಭಜಂತ್ರಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಅರುಂಧತಿ ಕುಲಕರ್ಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಗೋಪಾಲ ಸುರಪುರ ಮತ್ತಿತರರು ಇದ್ದರು.