ಶಾಲಾ ಪೂರ್ವ ಶಿಕ್ಷಣವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿ

| Published : Sep 14 2024, 01:56 AM IST

ಸಾರಾಂಶ

ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಗೊಂಡಿರುವ ಶಾಲಾ ಪೂರ್ವ ಶಿಕ್ಷಣವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು.

ಕುರುಗೋಡು: ಕಲಿಕೆ ಟಾಟಾ ಟ್ರಸ್ಟ್‌ನಲ್ಲಿ ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಗೊಂಡಿರುವ ಶಾಲಾ ಪೂರ್ವ ಶಿಕ್ಷಣವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್ ಸಲಹೆ ನೀಡಿದರು.

ತಾಲೂಕಿನ ದಮ್ಮೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಅಡಿಯಲ್ಲಿ ವಲಯಮಟ್ಟದ ಬಾಲಮೇಳದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಟಾಟಾ ಟ್ರಸ್ಟ್ ಸಂಯುಕ್ತವಾಗಿ ಅಂಗನವಾಡಿಗಳಲ್ಲಿ ಪ್ರಾರಂಭಗೊಂಡಿರುವ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮ ಬಲವರ್ಧನೆಗೊಳಿಸಲು ಶ್ರಮಿಸುತ್ತಿದೆ. ಇಲಾಖೆಯಿಂದಿಗೆ ಸಿಬ್ಬಂದಿ ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಯೋಜನಾಧಿಕಾರಿ ಮೋಹನಕುಮಾರಿ ಮಾತನಾಡಿ, ಕಾಲಕಾಲಕ್ಕೆ ಬಾಲಮೇಳಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗುತ್ತದೆ. ಮಕ್ಕಳನ್ನು ಮೇಳಕ್ಕೆ ಅಣಿಗೊಳಿಸುವ ಕಾರ್ಯಕರ್ತೆಯರಲ್ಲಿಯೂ ಸೃಜನಶೀಲನೆ ಹೆಚ್ಚಾಗುತ್ತದೆ ಎಂದರು.

ಪಿಡಿಒ ಮಲ್ಲಿಕಾರ್ಜುನ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬೇಕಾಗುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.ಕಲಿಕೆ ಟಾಟಾ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಕೆ.ಜಗನ್ನಾಥ್ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಉದ್ಘಾಟಿಸಿದರು.

ಅಂಗನವಾಡಿ ಕೇಂದ್ರಗಳಿಗೆ ವಿತರಿಸಿದ ಕಲಿಕಾ ಸಾಮಗ್ರಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಯಿತು. ತಾಲೂಕಿನ ದಮ್ಮೂರು, ಸಿಂಧಿಗೇರಿ, ಕೋಳೂರು ಮತ್ತು ಸೋಮಸಮುದ್ರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ತರಗತಿಗೆ ದಾಖಲಾಗಿರುವ ಮಕ್ಕಳು ಭಾಗವಹಿಸಿದ್ದರು.

ಅಂಗನವಾಡಿ ಮೇಲ್ವಿಚಾರಕಿ ಶಾಂಭವಿ, ಪಿಡಿಒ ಮಲ್ಲಿಕಾರ್ಜುನ, ಜ್ಯೋತಿ ಹೊಸಮನಿ ಮತ್ತು ಜಾಯಿ ಪ್ರಕಾಶ ರೆಡ್ಡಿ ಇದ್ದರು.