ಬೆಂಕಿಕಡ್ಡಿ ಗಾತ್ರದ ಈ ಸಣ್ಣ, ಹೊಂದಿಕೊಳ್ಳುವ ರಾಡ್ ಅನ್ನು ತರಬೇತಿ ಪಡೆದ ತಜ್ಞ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಗೆ ಅಳವಡಿಸುತ್ತಾರೆ.
ಬಳ್ಳಾರಿ: ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ಸರ್ಕಾರವು ಹೊಸ ಹೊಸ ವಿಧಾನ ಜಾರಿಗೆ ತರುತ್ತಿದೆ. ಈಗಾಗಲೇ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ನಿರೋಧ್ ಸೇವೆಗಳು ಲಭ್ಯವಿದ್ದು ಇದೀಗ ಹೊಸದಾಗಿ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕುಟುಂಬ ಕಲ್ಯಾಣ ಕಾರ್ಯಕ್ರಮ ಉಪನಿರ್ದೇಶಕ ಡಾ.ಚಂದ್ರಿಕಾ ಬಿ.ಆರ್. ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ತಜ್ಞ ವೈದ್ಯರು, ತಾಲೂಕು ಆರೋಗ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಗರ್ಭನಿರೋಧಕ ಅಳವಡಿಕೆ ಕುರಿತ ಪುನರ್ಮನನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಬೆಂಕಿಕಡ್ಡಿ ಗಾತ್ರದ ಈ ಸಣ್ಣ, ಹೊಂದಿಕೊಳ್ಳುವ ರಾಡ್ ಅನ್ನು ತರಬೇತಿ ಪಡೆದ ತಜ್ಞ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಗೆ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿದರೆ ಇದು ಗರ್ಭಧಾರಣೆಯಿಂದ ಸುಮಾರು 3 ವರ್ಷಗಳವರೆಗೆ ರಕ್ಷಣೆ ನೀಡುತ್ತದೆ. ಇದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ತಡೆಯುತ್ತದೆ, ಗರ್ಭಕಂಠದ ಲೋಳೆ ದಪ್ಪವಾಗಿಸಿ ವೀರ್ಯಾಣುಗಳು ಅಂಡಾಣುವನ್ನು ಸೇರದಂತೆ ತಡೆಯುತ್ತದೆ ಹಾಗೂ ಗರ್ಭಕೋಶದ ಒಳಪದರ ತೆಳುವಾಗಿಸಿ ಫಲವತ್ತಾದ ಅಂಡಾಣು ಅಳವಡಿಕೆಯಾಗುವುದನ್ನು ತಡೆಯುತ್ತದೆ ಎಂದು ತಿಳಿಸಿದರು.
ಇದು ಹಾರ್ಮೋನಿನ, ಹೆಚ್ಚು ಪರಿಣಾಮಕಾರಿಯಾದ ಮತ್ತು ಹಿಮ್ಮುಖಗೊಳಿಸಬಹುದಾದ ವಿಧಾನವಾಗಿದೆ. ಅರ್ಹ ದಂಪತಿಗಳಿಗೆ ಈ ಸೌಲಭ್ಯ ಒದಗಿಸುವುದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುವುದರ ಜತೆಗೆ ತಾಯಿ ಮತ್ತು ಶಿಶು ಮರಣ ಪ್ರಮಾಣ ಗಣನೀಯವಾಗಿ ತಗ್ಗಿಸಬಹುದು ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕಾನಂದ ಡಿ. ಮಳಗಿ ಮಾತನಾಡಿ, ಇದು ಅತ್ಯಂತ ಉಪಯುಕ್ತ ತರಬೇತಿಯಾಗಿದ್ದು, ವೈದ್ಯರು ಮತ್ತು ಸಿಬ್ಬಂದಿ ಇದರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮೊದಲು ಅರ್ಹ ದಂಪತಿಗಳಿಗೆ ಈ ಬಗ್ಗೆ ಸೂಕ್ತ ಅರಿವು ಮೂಡಿಸಿ ನಂತರ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಆರ್‌ಎಚ್ ರಾಜ್ಯಮಟ್ಟದ ಕಾರ್ಯಕ್ರಮ ಅಧಿಕಾರಿ ಮಾಯಾಂಕ್ ಕೆಡೆ, ಐಪಿಇ ಗ್ಲೋಬಲ್ ಲಿಮಿಟೆಡ್ ದೆಹಲಿಯ ಕಾರ್ಯಕ್ರಮ ವ್ಯವಸ್ಥಾಪಕ ಶೋಭನಾ ಸಿಂಗ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜಿ., ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿರುಪಾಕ್ಷಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.