ಹಾವೇರಿ:ಬ್ಯಾಂಕುಗಳು ಬಡವರು, ಮಹಿಳೆಯರು, ಜನಸಾಮಾನ್ಯರಿಗೆ ಆದ್ಯತೆ ನೀಡಬೇಕು. ಮೂರ್ನಾಲ್ಕು ತಿಂಗಳಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯನ್ನು ಮಾದರಿ ಬ್ಯಾಂಕಿಂಗ್ ಜಿಲ್ಲೆಯನ್ನಾಗಿ ಮಾಡಬೇಕೆನ್ನುವುದು ನನ್ನ ಆಸೆ. ಅದಕ್ಕಾಗಿ ಅಧಿಕಾರಿಗಳು ಸಂತೋಷದಿಂದ ಸಕ್ರಿಯರಾಗಿ ಕೆಲಸ ಮಾಡಬೇಕು. ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡಬೇಕೆಂದು ಏಳೆಂಟು ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಕೇಂದ್ರ ಸಹಕಾರ ಇಲಾಖೆ ಒಂದು ಜಿಲ್ಲೆಗೆ ಒಂದು ಡಿಸಿಸಿ ಬ್ಯಾಂಕ್ ಅಂತ ಒಪ್ಪಿಗೆ ನೀಡಿದೆ. ಕೆಲವು ಕಾನೂನಾತ್ಮಕ ವಿಷಯಗಳಿವೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರಬೇಕು ಎನ್ನುವುದು ನನ್ನ ಪ್ರಯತ್ನವಾಗಿದೆ. ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್‌ಗೆ ಅನುಮತಿಸಲು ಧಾರವಾಡ ಡಿಸಿಸಿ ಬ್ಯಾಂಕ್‌ನಿಂದ ಒಪ್ಪಿಗೆ ಪಡೆಯಬೇಕು. ನಬಾರ್ಡ್ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತರಿಗೆ ಆದ್ಯತೆ ನೀಡಿ: ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ನೀಡುತ್ತಿವೆ. ಆದರೆ, ಎಲ್ಲ ರೈತರೂ ಅಲ್ಲಿ ಬೆಳೆಸಾಲ ಪಡೆಯಲು ಆಗದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿ, ಅವರಿಗೆ ಪೋತ್ಸಾಹ ನೀಡಬೇಕು. ಕೃಷಿ ವಲಯದಲ್ಲಿ ಶೇ.1ರಷ್ಟು ಅಭಿವೃದ್ಧಿಯಾದರೆ, ಉತ್ಪಾದನಾ ವಲಯದಲ್ಲಿ ಶೇ.4ರಷ್ಟು ಅಭಿವೃದ್ಧಿಯಾಗುತ್ತದೆ. ಸೇವಾ ವಲಯದಲ್ಲಿ ಶೇ.10 ರಷ್ಟು ಅಭಿವೃದ್ಧಿಯಾಗುತ್ತದೆ. ಕೃಷಿ ವಲಯ ಅತ್ಯಂತ ಮಹತ್ವದ್ದಾಗಿದೆ. ರೈತ ಕೇವಲ ಉತ್ಪಾದಕ ಅಷ್ಟೇ ಅಲ್ಲ ಆತ ಗ್ರಾಹಕನೂ ಆಗಿದ್ದಾನೆ. ರೈತನ ಕೊಳ್ಳುವ ಶಕ್ತಿ ಹೆಚ್ಚಬೇಕು. ಸರ್ಕಾರದ ದೃಷ್ಟಿಯಿಂದ ರೈತರು, ದಲಿತರು, ಹಿಂದುಳಿದವರು ಆದ್ಯತೆಯ ವಲಯವಾಗಿದ್ದಾರೆ. ಅವರಿಗೆ ಬ್ಯಾಂಕ್‌ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಕೇಂದ್ರದ ಯೋಜನೆಗಳನ್ನು ಹೆಚ್ಚಿಗೆ ಜನರಿಗೆ ತಲುಪಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಬ್ಯಾಂಕ್‌ಗಳು ಎಷ್ಟು ಸ್ವಸಹಾಯ ಗುಂಪುಗಳನ್ನು ಗುರುತಿಸಿ ಸಾಲ ನೀಡಿವೆ. ಸಣ್ಣ ಕೈಗಾರಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮಾರ್ಚ್‌ ತ್ರೈಮಾಸಿಕ ಅಂತ್ಯದ ಗುರಿಯ ಒಟ್ಟಾರೆ ಸಾಲ ವಿತರಣೆಯು ಗುರಿಯ ಶೇ.107ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ಆದ್ಯತಾ ವಲಯ ಅಡಿಯಲ್ಲಿ ಶೇ.101ರಷ್ಟು, ಕೃಷಿಯೇತರ ವಲಯ ಮತ್ತು ಇತರೆ ಆದ್ಯತಾ ವಲಯ ಅಡಿಯಲ್ಲಿ ಕ್ರಮವಾಗಿ ಶೇ.104 ಮತ್ತು ಶೇ.77ರಷ್ಟು ಪ್ರಗತಿ ಆಗಿದೆ. ಒಟ್ಟಾರೆ ಕೃಷಿ ಅಡಿಯಲ್ಲಿ ಶೇ.102ರಷ್ಟು ಸಾಧನೆ ಆಗಿದ್ದರೆ, ಬೆಳೆ ಸಾಲದ ಅಡಿಯಲ್ಲಿ ಗುರಿಯ ಶೇ.100 ರಷ್ಟು ದಾಖಲಾಗಿದೆ. ಕೃಷಿ ಅವಧಿ ಸಾಲಗಳ ಅಡಿಯಲ್ಲಿ ಗುರಿಯ ಶೇ.106 ರಷ್ಟು ಹಾಗೂ ಆದ್ಯತಾ ರಹಿತ ವಲಯದ ಅಡಿಯಲ್ಲಿ ಗುರಿಯ ಶೇ.136ರಷ್ಟು ದಾಖಲಾಗಿದೆ ಎಂದು ಹೇಳಿದರು.

ತಾಲೂಕುವಾರು ಸಾಧನೆಯಲ್ಲಿ ರಟ್ಟಿಹಳ್ಳಿ ಪ್ರಥಮ ಸ್ಥಾನದಲ್ಲಿದ್ದರೆ, ಹಿರೇಕೆರೂರು ದ್ವಿತೀಯ ಸ್ಥಾನದಲ್ಲಿದೆ. ಹಾಗೆ ಇನ್ನುಳಿದ ತಾಲ್ಲೂಕುಗಳು ಹಾನಗಲ್, ಬ್ಯಾಡಗಿ, ಹಾವೇರಿ, ಸವಣೂರು, ರಾಣಿಬೆನ್ನೂರು ಹಾಗೂ ಶಿಗ್ಗಾಂವ ಕ್ರಮವಾಗಿ ನಂತರದ ಸ್ಥಾನಗಳಲ್ಲಿರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಲ್ಜಿತ್ ಕುಮಾರ, ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಆರ್., ಆರ್‌ಬಿಐನ ಜಿಲ್ಲಾ ಮಟ್ಟದ ಅಧಿಕಾರಿ ಆರ್. ಪ್ರಭಾಕರನ್, ಬ್ಯಾಂಕ್ ಆಫ್ ಬರೋಡಾದ ರಿಜಿನಲ್ ಮ್ಯಾನೇಜರ್ ಸುಹಾಸ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿಭಾಗೀಯ ಮ್ಯಾನೇಜರ್ ನವೀನ ಬಿ., ನಬಾರ್ಡನ ಡಿಡಿಎಂ ರಂಗನಾಥ, ಎಸ್‌ಬಿಐನ ರಿಜಿನಲ್ ಮ್ಯಾನೇಜರ್‌ ರಾಘವೇಂದ್ರ ರಾವ್, ಲೀಡ್ ಬ್ಯಾಂಕಿನ ಮ್ಯಾನೇಜರ್ ಪ್ರಭುದೇವ ಸೇರಿದಂತೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಹಾಜರಿದ್ದರು.