ಮೃತ ಬಾಣಂತಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನ: ಬಸವರಾಜ ರಾಯರಡ್ಡಿ

| Published : Jan 07 2025, 12:32 AM IST

ಮೃತ ಬಾಣಂತಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನ: ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮೃತ ಬಾಣಂತಿ ಹಾಗೂ ಮಗುವಿನ ಕುಟುಂಬ ಬಡತನದಲ್ಲಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ಸಿಎಂ ಆರ್ಥಿಕ ಸಲಹೆಗಾರ ಹೇಳಿಕೆ । ಆಡೂರ ಗ್ರಾಮದ ಮನೆಗೆ ಭೇಟಿಕನ್ನಡಪ್ರಭ ವಾರ್ತೆ ಕುಕನೂರು

ಮೃತ ಬಾಣಂತಿ ಹಾಗೂ ಮಗುವಿನ ಕುಟುಂಬ ಬಡತನದಲ್ಲಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ತಾಲೂಕಿನ ಆಡೂರು ಗ್ರಾಮದಲ್ಲಿ ಮೃತ ಬಾಣಂತಿ ರೇಣುಕಾ ಹಿರೇಮನಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಬಾಣಂತಿ ಕುಟುಂಬಕ್ಕೆ ಸರ್ಕಾರ ಮಟ್ಟದಲ್ಲಿ ಮಾತನಾಡಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಬಾಣಂತಿ ಸಾವಿಗೆ ಪೌಷ್ಠಿಕ ಆಹಾರದ ಕೊರತೆ ಸಹ ಇದೆ. ಅದಕ್ಕಾಗಿ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಹೆಚ್ಚು ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ರೇಣುಕಾ ಸಾವು ಆಗಬಾರದಿತ್ತು. ಬಾಣಂತಿಯರಿಗೆ ಪೌಷ್ಠಿಕ ಆಹಾರದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ವೈದ್ಯರು ಸಹ ಜಾಗ್ರತೆ ವಹಿಸಬೇಕು. ಬಾಣಂತಿಯರನ್ನು ಪ್ರತಿಯೊಬ್ಬರು ಜಾಗೃತಿಯಿಂದ ನೋಡಿಕೊಳ್ಳಬೇಕು ಎಂದರು.

ವೈಯಕ್ತಿಕ ಸಹಾಯ:

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ರೇಣುಕಾ ಕುಟುಂಬಕ್ಕೆ ವೈಯಕ್ತಿಕವಾಗಿ ₹10 ಹತ್ತು ಸಾವಿರ ಧನ ಸಹಾಯ ಮಾಡಿದರು.

ರಾಜಕೀಯ ಬೇಡ:

ಬಿಜೆಪಿಯಿಂದ ಬಾಣಂತಿ ಹಾಗೂ ಮಕ್ಕಳ ಸಾವಿನ ಬಗ್ಗೆ ಸತ್ಯಶೋಧನಾ ಸಮಿತಿ ತನಿಖೆ ಮಾಡುತ್ತಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರವೇ ಔಷಧ ನೀಡುತ್ತದೆ. ಅದರಲ್ಲಿ ರಾಜ್ಯದ ಪಾತ್ರವಿಲ್ಲ. ರಾಜ್ಯದಲ್ಲಿ ಬಾಣಂತಿಯರ ಸಾವು ಈ ಹಿಂದೆ ಸಾವಿರ ಜನಕ್ಕೆ 102 ಇತ್ತು. ಸದ್ಯ ಸಾವಿರ ಜನಕ್ಕೆ 14 ಆಗಿದೆ. ಶಾಸಕನಾಗಿ ನಾನು ನನ್ನ ವೈಯಕ್ತಿಕ ಧನ ಸಹಾಯ ಮಾಡಿದ್ದೇನೆ. ಸರ್ಕಾರದಿಂದಲೂ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅದನ್ನು ಬಿಟ್ಟು ಸಮಿತಿಯವರು ರಾಜಕೀಯವಾಗಿ ಮಾತನಾಡುವುದು, ಬೈಯುವುದು ಮಾಡಬಾರದು. ಅವರು ನಮ್ಮನ್ನು ಬೈಯುವುದು, ನಾವು ಅವರನ್ನು ಬೈಯುವ ಕಾರ್ಯ ಆಗಬಾರದು ಎಂದು ರಾಯರಡ್ಡಿ ಹೇಳಿದರು.

ಕುಕನೂರು ಪ್ರಾಥಮಿಕ ಚುನಾವಣೆ ಕಾನೂನಾತ್ಮಕ:

ಇತ್ತೀಚೆಗೆ ಕುಕನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜರುಗಿದ್ದು, ಅದರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಬರಲಾರದ ರೈತರು ಕೋರ್ಟ್‌ ಮೊರೆ ಹೋಗಿ ಮತದಾನದ ಹಕ್ಕು ಪಡೆದು ಮತ ಚಲಾಯಿಸಿದ್ದಾರೆ. ಕೋರ್ಟ್‌ ಮೊದಲ ಮತದಾರರ ಪಟ್ಟಿಯ ಮತ ಎಣಿಕೆಯನ್ನು ಚುನಾವಣಾಧಿಕಾರಿ ಮಾಡಬಹುದು, ಇಲ್ಲವೇ ಮಾಡದೆ ಇರಬಹುದು ಎಂದು ಹೇಳಿದೆ. ಹಾಗಾಗಿ ಎರಡು ಮತಪೆಟ್ಟಿಗೆ ಮತ ಎಣಿಕೆಯನ್ನು ಒಟ್ಟಿಗೆ ಮಾಡಲು ಸಹಕಾರ ಇಲಾಖೆ ಜಿಲ್ಲಾ ಅಧಿಕಾರಿ ಸಲಹೆಯಂತೆ ಚುನಾವಣಾಧಿಕಾರಿ ನಿರ್ಧಾರ ಮಾಡಿದ್ದಾರೆ. ಅದರಲ್ಲಿ ರಾಜಕೀಯ ಬೆರೆಸಿ ಬಿಜೆಪಿಯವರು ಮಾತನಾಡುವುದು ತಪ್ಪು. ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದಂತೆ ನನಗೆ ಸಹಕಾರಿ ಸಂಘದಲ್ಲಿ ಗಂಧ ಗಾಳಿ ಗೊತ್ತಿಲ್ಲ. ಆದರೆ ನನಗೆ ಕಾನೂನು ಗೊತ್ತಿದೆ. ಸಂಘದ ಚುನಾವಣೆ ಕಾನೂನಾತ್ಮಕವಾಗಿ ಜರುಗಿದೆ ಎಂದರು.ಮುಂಬರುವ ದಿನಗಳಲ್ಲಿ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬರಬೇಕು. ಹಾಗೆ ಡಿಸಿಸಿ ಬ್ಯಾಂಕಿಗೂ ಸಹ ಮೀಸಲಾತಿ ಬರಬೇಕು. ಆ ನಿಟ್ಟಿನಲ್ಲಿ ಸಿಎಂ ಜೊತೆ ಮಾತನಾಡುತ್ತೇನೆ ಎಂದರು.