ಶಿಕಾರಿಪುರದಲ್ಲಿ ಸರ್ವಾಂಗೀಣ ಪ್ರಗತಿಗೆ ಶ್ರಮ

| Published : Oct 19 2024, 12:19 AM IST

ಸಾರಾಂಶ

ರಾಜಕೀಯ ಜನ್ಮ ನೀಡಿದ ತಾಲೂಕಿಗೆ ಮೂಲಭೂತ ಸೌಲಭ್ಯ ಸಹಿತ ಆರೋಗ್ಯ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದು ಯಡಿಯೂರಪ್ಪನವರ ಕನಸಾಗಿದ್ದು, ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಾಜಕೀಯ ಜನ್ಮ ನೀಡಿದ ತಾಲೂಕಿಗೆ ಮೂಲಭೂತ ಸೌಲಭ್ಯ ಸಹಿತ ಆರೋಗ್ಯ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದು ಯಡಿಯೂರಪ್ಪನವರ ಕನಸಾಗಿದ್ದು, ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದಾಜು ₹21 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಒಳಾಂಗಣ ಕ್ರೀಡಾಂಗಣ, ಮಹಿಳಾ ವಸತಿ ನಿಲಯ, ನೂತನ ಕೊಠಡಿಗಳ ಉದ್ಘಾಟನೆ ಹಾಗೂ 2024-25 ನೇ ಸಾಲಿನ ಕಾಲೇಜಿನ ವಿವಿಧ ಚಟುವಟಿಕೆಗಳ ಮತ್ತು ಕು.ವಿ.ವಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳಾ ಷಟಲ್ ಬ್ಯಾಟ್ ಮಿಟನ್ ಪಂದ್ಯಾವಳಿ ಹಾಗೂ ಆಯ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಬದುಕಿನಲ್ಲಿ ದೊರೆಯುವ ಈ ಅವಕಾಶವನ್ನು ಪ್ರತಿಯೊಬ್ಬರೂ ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆಧುನಿಕ ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಯತ್ನಿಸಬೇಕೇ ಹೊರತು ಮೊಬೈಲ್ ಗೀಳಿನಿಂದ ಉಜ್ವಲ ಭವಿಷ್ಯ ಹಾಳುಮಾಡಿಕೊಳ್ಳಬಾರದು. ಅನಾರೋಗ್ಯದಿಂದ ದೇಹ ಹಾಳಾಗಲಿದ್ದು, ಚಾರಿತ್ರ್ಯ ಹಾಳಾದಲ್ಲಿ ಜೀವನ ಪೂರ್ತಿ ನರಳಬೇಕಾದೀತು ಎಂದು ತಿಳಿಸಿದರು.ರಾಜಕೀಯ ಜನ್ಮ ನೀಡಿದ ತಾಲೂಕಿನ ಸಮಗ್ರ ಅಭಿವೃದ್ಧಿ ಯಡಿಯೂರಪ್ಪನವರ ಕನಸಾಗಿದ್ದು, ಈ ದಿಸೆಯಲ್ಲಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಾಧನೆ ಮಾತನಾಡುವಂತೆ ಮೂಲಭೂತ ಸೌಲಭ್ಯದ ಜತೆಗೆ ಎಲ್ಲ ಕೋರ್ಸ್ಗಳ ಕಾಲೇಜು, ಹಾಸ್ಟೆಲ್ ಮೂಲಕ ಶೈಕ್ಷಣಿಕ ಕೇಂದ್ರವಾಗಿ ನಿರ್ಮಿಸಲಾಗಿದೆ. ಉತ್ಕೃಷ್ಟ ಶಿಕ್ಷಣಕ್ಕಾಗಿ ಹಾವೇರಿ, ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳು ಧಾವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಖುಷಿವ್ಯಕ್ತಪಡಿಸಿದರು.

ಆಸ್ಪತ್ರೆಯ ಆಧುನೀಕರಣದಿಂದ ಅಕ್ಕಪಕ್ಕದ ತಾಲೂಕಿನ ಜನತೆ ಸಹ ಪ್ರಯೋಜನ ಪಡೆಯುತ್ತಿದ್ದಾರೆ. ಯಡಿಯೂರಪ್ಪನವರ ಸಂಕಲ್ಪ ಶಕ್ತಿಯ ಪರಿಣಾಮವಾಗಿ ₹21 ಕೋಟಿ ವೆಚ್ಚದಲ್ಲಿ ಕಾಲೇಜಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿದ್ದು, ಸಂಪೂರ್ಣ ಶ್ರೇಯಸ್ಸು ಯಡಿಯೂರಪ್ಪನವರ ಸಹಿತ ಸಂಸದ ರಾಘವೇಂದ್ರರಿಗೆ ಸಲ್ಲಬೇಕು ಎಂದು ತಿಳಿಸಿದರು.ಸಕಲ ಸೌಲಭ್ಯ ಒಳಗೊಂಡ ಕಾಲೇಜು ಆವರಣ ಎಲ್ಲ ತಾಲೂಕು ಮಟ್ಟದ ಕಾಲೇಜುಗಳಿಗೆ ಮಾದರಿಯಾಗಿದ್ದು, ಪ್ರತಿ ವಿದ್ಯಾರ್ಥಿಯ ಉಜ್ವಲ ಭವಿಷ್ಯದ ಕನಸು ನನಸಾಗಲು ಸೌಲಭ್ಯ ಕಲ್ಪಿಸಲಾಗಿದೆ. ಪ್ರಯೋಜನ ಪಡೆದು ಐಎಎಸ್, ಐಪಿಎಸ್ ಮತ್ತಿತರ ಉನ್ನತ ಗುರಿ ಸಾಧನೆಗೆ ಯತ್ನಿಸುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ವಿಜಯೇಂದ್ರರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ರಮೇಶ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ವಿಷ್ಣುಮೂರ್ತಿ, ಶಂಕರಘಟ್ಟದ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ. ಎನ್.ಡಿ. ವಿರುಪಾಕ್ಷಪ್ಪ, ಪ್ರಾಧ್ಯಾಪಕ ಡಾ. ಶೇಖರ್, ಡಾ. ಮಂಜುಳಾ, ರೇಷ್ಮಾ, ಐಕ್ಯೂಎಸಿ ಸಂಚಾಲಕ ಡಾ. ಅಜಯಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಿನಯ್, ದೈಹಿಕ ಶಿಕ್ಷಣ ಬೋಧಕ ನಾರಾಯಣ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪುರಸಭಾ ಸದಸ್ಯ ಪಾಲಾಕ್ಷಪ್ಪ ಸಹಿತ ಕಾಲೇಜಿನ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾರುಣಿ ಪ್ರಾರ್ಥಿಸಿ, ಸುಧೀರ್ ಸ್ವಾಗತಿಸಿ, ಸುನೀಲ್ ನಿರೂಪಿಸಿ ವಂದಿಸಿದರು.