ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯ ಪ್ರಯತ್ನ ನಡೆಸಿದ್ದೇನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

| N/A | Published : Apr 21 2025, 12:51 AM IST / Updated: Apr 21 2025, 10:58 AM IST

ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯ ಪ್ರಯತ್ನ ನಡೆಸಿದ್ದೇನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

‘ನಾನು ಮುಖ್ಯಮಂತ್ರಿ ಆದಾಗಿನಿಂದ ಎಲ್ಲಾ ಸಮಾಜಗಳಿಗೂ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯ ಪ್ರಯತ್ನ ನಡೆಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 ಬೆಳಗಾವಿ/ಚಿಕ್ಕೋಡಿ : ‘ನಾನು ಮುಖ್ಯಮಂತ್ರಿ ಆದಾಗಿನಿಂದ ಎಲ್ಲಾ ಸಮಾಜಗಳಿಗೂ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯ ಪ್ರಯತ್ನ ನಡೆಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕೋಡಿಯ ಆರ್.ಡಿ.ಮೈದಾನದಲ್ಲಿ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಹಣಬರ ಸಂಘ ಆಯೋಜಿಸಿರುವ ಶತಮಾನೋತ್ಸವ ಮತ್ತು ಯಾದವಾನಂದ ಸ್ವಾಮೀಜಿಗಳ 16ನೇ ಪಟ್ಟಾಭಿಷೇಕದ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ತಿಳಿಸಿದಂತೆ ಶಿಕ್ಷಣ, ಸಂಘಟನೆ, ಹೋರಾಟಗಳು ಶೋಷಿತವರ್ಗಗಳಿಗೆ ಮೂಲಮಂತ್ರವಾಗಬೇಕು. ಆಗ ಮಾತ್ರ ಗುಲಾಮಗಿರಿಯನ್ನು ನೀಗಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಮಾಜದಲ್ಲಿ ಅಸಮಾನತೆ ಸಾಕಷ್ಟಿದೆ. ಬಹುಸಂಖ್ಯಾತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಅವಕಾಶ ವಂಚಿತರಿಗೆ, ಬಡವರಿಗೆ, ಶೋಷಿತರಿಗೆ ಸಮಾನ ಅವಕಾಶ ಹಾಗೂ ಸಮಾನತೆಯನ್ನು ಪಡೆಯಲು ಹೋರಾಟ ಮಾಡಬೇಕು ಎಂದರು.

 ₹40 ಕೋಟಿ ಮೊತ್ತದ ಕೃಷಿ ಸವಲತ್ತುಗಳ ವಿತರಣೆ:

ಇದಕ್ಕೂ ಮೊದಲು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸಮಾರಂಭದಲ್ಲಿ ಕೃಷಿ‌ ಇಲಾಖೆಯ ಸಹಾಯಧನದಡಿಯಲ್ಲಿ ರೈತರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ₹40 ಕೋಟಿ ವೆಚ್ಚದಲ್ಲಿ 78 ಕಬ್ಬು ಕಟಾವು ಯಂತ್ರ, 100 ಪವರ್ ಟಿಲ್ಲರ್, 165 ರೋಟೊವೇಟರ್, 120 ನೇಗಿಲು, 100 ಮೇವು ಕತ್ತರಿಸುವ ಯಂತ್ರ, 64 ಬಿತ್ತನೆ ಕೂರಿಗೆ, 26 ರಾಶಿ ಯಂತ್ರ, 5 ಕೋಲಿ‌ ಕತ್ತರಿಸುವ ಯಂತ್ರ, 12 ಭೂಮ್ ಸ್ಪ್ರೇಯರ್ ಯಂತ್ರ, 1,480 ಸ್ಪ್ರೀಂಕ್ಲರ್... ಹೀಗೆ ಒಟ್ಟು 2,150 ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಅವರು ವಿತರಿಸಿದರು. 

ಪೌರ ಕಾರ್ಮಿಕರ ಸೇವೆ ಕಾಯಮಾತಿಗೆ ಕ್ರಮ:ಬಳಿಕ, ಬೆಳಗಾವಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಬಹುಮಹಡಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. 

ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಕಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದು ತಿಳಿಸಿದರು.ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಪೌರಕಾರ್ಮಿಕರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕವೇ ವೇತನ ನೀಡುವುದರ ಜತೆಗೆ ಅವರನ್ನು ಸರಕಾರಿ ನೌಕರರಾಗಿ ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕ್ರಯಪತ್ರ ಜತೆಗೆ ವಿದ್ಯುತ್ ಹಾಗೂ ನೀರು ಸರಬರಾಜು ಬಿಲ್ ಗಳನ್ನು ಕೂಡ ಪರಿಗಣಿಸಿ ಅವರಿಗೆ ಇ-ಖಾತೆ ಮಾಡಿಕೊಡಲು ಸರಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಒಟ್ಟಾರೆ ₹200 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.