ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳಾ ನೌಕರರಿಗೆ ಖಾಯಂ ನೌಕರರಂತೆಯೇ ಹೆರಿಗೆ ರಜೆ, ಹೆರಿಗೆ ಭತ್ಯೆ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದರು.ನಗರದ ಜಿಲ್ಲಾ ಬಾಲಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಮಟ್ಟದ ವಾರ್ಷಿಕ ಮಹೋತ್ಸವ, ಜಿಲ್ಲಾ ಸಮಿತಿಯ ಅಭಿನಂದನಾ ಸಮಾರಂಭ ಹಾಗೂ ರಾಜ್ಯ ಮಟ್ಟದ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಒಗ್ಗಟ್ಟು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು. ಸರ್ಕಾರದ ಖಾಯಂ ಮಹಿಳಾ ನೌಕರರಿಗೆ ನೀಡುವಂತೆಯೇ ಹೊರಗುತ್ತಿಗೆ ಮಹಿಳಾ ನೌಕರರಿಗೂ ಹೆರಿಗೆ ಭತ್ಯೆ, ಹೆರಿಗೆ ರಜೆ ಸೌಲಭ್ಯ ಕಲ್ಪಿಸಬೇಕು. ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುವ ಬಹುಪಾಲು ನೌಕರರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ನೌಕರಿ ಅವರಿಗೆ ಅನಿವಾರ್ಯವಾಗಿರುತ್ತದೆ. ಹೆರಿಗೆ ಸಮಯದಲ್ಲಿ ಹೊರಗುತ್ತಿಗೆ ಮಹಿಳಾ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಭತ್ಯೆ, ರಜಾ ಸೌಲಭ್ಯವನ್ನು ನೀಡುವಂತೆ ಈಗಾಗಲೇ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗುವುದೆಂದರು. ಹೊರಗುತ್ತಿಗೆ ನೌಕರರು ಜೀತಪದ್ಧತಿಯಂತೆ ದುಡಿಯಬೇಕಾಗಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಸಂಪೂರ್ಣ ಅರ್ಹರಿರುತ್ತಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ ಪಾವತಿಯಾಗುತ್ತಿಲ್ಲ. ಸಕಾಲದಲ್ಲಿ ಸಂಬಳ ಕೈಗೆ ಸಿಗುತ್ತಿಲ್ಲವೆಂದು ದೂರುಗಳು ಕೇಳಿ ಬಂದಿವೆ. ಸಕಾಲದಲ್ಲಿ ಕನಿಷ್ಠ ವೇತನ ಪಾವತಿ ಮಾಡದ ನೇಮಕಾತಿ ಏಜೆನ್ಸಿಗಳನ್ನು ಬ್ಲಾಕ್ ಲಿಸ್ಟ್ ಸೇರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗುತ್ತಿಗೆ ನೌಕರರು ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಕಾನೂನು ಮೂಲಕ ಹೋರಾಡಿದಾಗ ಮಾತ್ರ ಗೆಲುವು ದೊರೆಯುತ್ತದೆ. ಈ ನಿಟ್ಟಿನಲ್ಲಿ ಹೊರಗುತ್ತಿಗೆ ನೌಕರರು ಸಂಘಟನೆ ಮೂಲಕ ಹೋರಾಡಬೇಕೆಂದು ಸಲಹೆ ನೀಡಿದರು. ಅರ್ಹತೆ ಇರುವುದನ್ನು ಪಡೆಯಲು ಒಗ್ಗಟ್ಟಿನ ದನಿ ಎತ್ತಲೇಬೇಕು. ಎಲ್ಲಿಯವರೆಗೂ ದನಿ ಎತ್ತುವುದಿಲ್ಲವೋ ಅಲ್ಲಿಯವರೆಗೂ ಸೌಲಭ್ಯಗಳು ನಮ್ಮ ಕೈ ಸೇರುವುದಿಲ್ಲ. ಹೊರಗುತ್ತಿಗೆ ನೌಕರರಿಗೆ ಸಕಾಲದಲ್ಲಿ ಕನಿಷ್ಠ ವೇತನ ಪಾವತಿ ಮಾಡುವುದು ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಖಾಯಂ ನೌಕರರಿಗಿಂತ ಹೆಚ್ಚು ಕೆಲಸ ಮಾಡುವ ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಯಲ್ಲಿ ತಾರತಮ್ಯ ಕಂಡು ಬಂದರೆ ಆಯೋಗ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದು ತಿಳಿಸಿದರು. ನೇಮಕಾತಿ ಏಜೆನ್ಸಿಗಳು ಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಮಾಹೆಯಾನ ಕನಿಷ್ಠ 14,000 ರು.ಗಳ ವೇತನವನ್ನು ಪಾವತಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೆ,ಬರುವ ದಿನಗಳಲ್ಲಿ ಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಮಾಡಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರ ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಡಿ.ಎಂ ಗೌಡ, ತುಮಕೂರು ಜಿಲ್ಲಾ ಘಟಕ ಮತ್ತು ರಾಜ್ಯ ಸಮಿತಿ ನಿರ್ದೇಶಕ ಬಿ. ಸಿದ್ದಪ್ಪ, ರಾಜ್ಯ ಸಮಿತಿ ಪದಾಧಿಕಾರಿಗಳು, ಕಿರಣ್ ಕಾರ್ತಿಕ್, ರಾಜ್ಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.