ಸಾರಾಂಶ
ಕನ್ನಡಪ್ರಭವಾರ್ತೆ ತರೀಕೆರೆ
ವಿಕಸನ ಸಂಸ್ಥೆಯು ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.ಪಟ್ಟಣದ ಗಾಳಿಹಳ್ಳಿ ಕ್ರಾಸ್ ಬಳಿಯ ವಿಕಸನ ಸಂಸ್ಥೆ ಅವರಣದಲ್ಲಿ ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆ ಹಿರಿಯ ನಾಗರಿಕರ ಸರ್ವತೋಮುಖ ಅಭಿವೃದ್ದಿಗೆ ಕಾರ್ಯಪ್ರವೃತ್ತವಾಗಿದೆ. ಮುಖ್ಯವಾಗಿ ಹಿರಿಯ ನಾಗರಿಕ ಸದಸ್ಯರ ದಾಖಲಾತಿ, ವಾಟ್ಸಾಪ್ ಗುಂಪು ಪಾರಂಭಿಸುವುದು, ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ದೊರೆಯುವ ಮಾಹಿತಿ ನೀಡುವುದು, ಜೀವವಿಮೆ ಮಾಡಿಸುವುದು, ತಾಲೂಕು ಮಟ್ಟದ ಸಮ್ಮೇಳನ ಏರ್ಪಡಿಸುವುದು, ಆರೋಗ್ಯ ತಪಾಸಣೆ, ಪರಿಸರ ಸಂರಕ್ಷಣೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸದಾ ಹಿರಿಯ ನಾಗರಿಕರನ್ನು ಚಟುವಟಿಕೆಯಿಂದ ಇಡಲು ಹಂತ ಹಂತವಾಗಿ ಕಾರ್ಯಕ್ರಮ ರೂಪಿಸುವುದರ ಬಗ್ಗೆ ಮಾಹಿತಿ ನೀಡಿದರು.ಶಿವಮೊಗ್ಗದ ಟೀಮ್ ಒನ್ ಇಂಡಿಯಾ ರಾಮಚಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಯಸ್ಕಾಂತ ಚಿಕಿತ್ಸೆಯ ಬಗ್ಗೆ ಮಾತನಾಡಿ. ಆಯಸ್ಕಾಂತ ಚಿಕಿತ್ಸೆಯಿಂದ ಸದೃಢ ದೇಹ, ಸದೃಢ ಕುಟುಂಬ, ರೋಗದಿಂದ ಮುಕ್ತಿ, ನೋವು ರಹಿತ ಚಿಕಿತ್ಸೆ, ಆಸ್ಪತ್ರೆ ಖರ್ಚುಗಳಿಂದ ದೂರ ಇರುವುದರ ಬಗ್ಗೆ ತಿಳಿಸಿದರು. ಅಲ್ಲದೆ ರಕ್ತದ ಒತ್ತಡ, ಮಧುಮೇಹ, ಮಂಡಿನೋವು ಮುಂತಾದ ಹಲವು ಕಾಯಿಲೆ ಆಯಸ್ಕಾಂತ ಚಿಕಿತ್ಸೆ ಮೂಲಕ ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ನೀಡಿದರು.ಹುಣಸಘಟ್ಟ ವಿಶ್ವ ರೈತ ಚೇತನಾ ಸೇವಾ ಸಂಘದ ಸಾವಯವ ಕೃಷಿಕ ಪ್ರಭುಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಹಾರ ಉತ್ಪಾದನೆಗೆ ಅತೀವ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಧುಮೇಹ, ರಕ್ತದ ಒತ್ತಡ ಇನ್ನೂ ಹಲವಾರು ಕಾಯಿಲೆಗಳಿಂದ ಮನುಷ್ಯ ನರಳುತ್ತಿದ್ದಾನೆ. ಒಂದಿಲ್ಲೊಂದು ಕಾರಣಗಳಿಂದ ಪ್ರತಿನಿತ್ಯ ಆಸ್ಪತ್ರೆ ಅವಲಂಬಿಸಬೇಕಾಗಿದೆ. ಹೀಗಾಗಿ ಹೆಚ್ಚು ಹೆಚ್ಚು ಸಿರಿಧಾನ್ಯಗಳ ಬಳಕೆ ಅಗತ್ಯ. ಅಕ್ಕಿ, ಗೋಧಿ, ಸಕ್ಕರೆ ಮೈದಾ, ಉಪ್ಪು ಇವುಗಳನ್ನು ತ್ಯಜಿಸುವುದು ಮತ್ತು ಕಡಿಮೆ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಸದೃಢವಾಗಿಡಬಹುದು ಎಂದರು. ಅಲ್ಲದೆ ನಾಟಿ ಹಸುವಿನ ಹಾಲು, ತುಪ್ಪ ಬೆಣ್ಣೆ ಇತರೇ ಪದಾರ್ಥಗಳನ್ನು ಹೆಚ್ಚೆಚ್ಚು ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಹಾಗೂ ಸಾವಯವ ಕೃಷಿ ಮತ್ತು ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಆಯುಷ್ಯ ಹೆಚ್ಚುವುದು ಎಂದು ತಿಳಿಸಿದರು.
ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾದ್ಯಕ್ಷರಾದ ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ಹಿರಿಯ ನಾಗರಿಕರನ್ನು ಸದಾ ಚಟುವಟಿಕೆಯಿಂದ ಇರಿಸಲು ತರಬೇತಿ ಕಾರ್ಯಾಗಾರ, ಚಿಂತನೆಗಳಲ್ಲಿ ತೊಡಗಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಾಗರಿಕರನ್ನು ಸಂಘಟಿಸಿ ಅವರ ಶ್ರೇಯೋಭಿವದ್ಧಿಗಾಗಿ ಶ್ರಮಿಸುತ್ತಿರುವ ವಿಕಸನ ಸಂಸ್ಥೆಯ ಎಲ್ಲಾ ಸದಸ್ಯರನ್ನು ಪ್ರಶಂಸಿಸಿದ ಅವರು ಸುಶ್ರಾವ್ಯವಾಗಿ ಗೀತೆಯನ್ನು ಹಾಡಿದರು.ವಿಕಸನ ಸಂಸ್ಥೆ ಗಾಳೀಹಳ್ಳಿಯ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಸಾವಯವ ಪದಾರ್ಥಗಳನ್ನು ಸ್ವತಃ ತಯಾರಿಸಿ, ಸಂಸ್ಕರಿಸಿ, ಮಾರುಕಟ್ಟೆಗೆ ಪರಿಚಯಿಸಲಾಯಿತು. ಅದರಲ್ಲೂ ಸಾವಯವ ಅರಿಷಿಣ ಪುಡಿ, ಕೊಬ್ಬರಿ ಎಣ್ಣೆ, ಬೇವಿನ ಎಣ್ಣೆ, ಹಲಸಿನ ಚಿಪ್ಸ್,, ಕಾಳುಮೆಣಸು, ಕಾಫಿ ಮತ್ತು ಟೀಪುಡಿ, ಜೇನುತುಪ್ಪ ಇತ್ಯಾದಿ ವಸ್ತು ಪ್ರದರ್ಶಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳಾದ ವಿಶಾಲಾಕ್ಷಮ್ಮ, ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಕಸನ ಸಂಸ್ಥೆಯ ಕ್ರಿಸ್ತ ದಯಾಕುಮಾರ್ ಸ್ವಾಗತಿಸಿದರು. ಮುಕುಂದ ವಂದಿಸಿದರು.