ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದ.ಕ., ಉಡುಪಿ- ಚಿಕ್ಕಮಗಳೂರು, ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸಲು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಮಾನಿಸಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್, ಟಿಕೆಟ್ ವಂಚಿತರಾದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಘಟನೆಯ ನಿರ್ಧಾರವನ್ನು ಪ್ರಕಟಿಸಿದರು.
ನಾರಾಯಣಗುರು ಅನುಯಾಯಿಗಳಾದ ಬಿಲ್ಲವ, ಈಡಿಗ, ನಾಮಧಾರಿ ಇತ್ಯಾದಿ 26 ಪಂಗಡಗಳುಳ್ಳ ಸಮಾಜಕ್ಕೆ ಅನೇಕ ವರ್ಷಗಳ ನಂತರ 3 ಕ್ಷೇತ್ರಗಳಲ್ಲಿ ಚುನಾವಣಾ ಸ್ಪರ್ಧೆಗೆ ಅವಕಾಶ ದೊರೆತಿದೆ. ಸಮಾಜದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ವೇದಿಕೆಯಿಂದ ನಡೆಸಲಿದ್ದೇವೆ. ಇವರು ಮೂವರು ಗೆದ್ದರೆ ಉಳಿದ ಸಮಾಜಗಳಂತೆ ನಮ್ಮ ಸಮಾಜವನ್ನು ಶೈಕ್ಷಣಿಕ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಆಗಲಿದೆ. ಆ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸುವುದಾಗಿ ಸತ್ಯಜಿತ್ ಸುರತ್ಕಲ್ ಹೇಳಿದರು.ದ.ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಬಿಲ್ಲವ ಸಮಾಜವೇ ಇಲ್ಲಿ ಬಹುಸಂಖ್ಯಾತ ಆಗಿದ್ದರೂ ಬಿಜೆಪಿಯಿಂದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಿರಲಿಲ್ಲ. ಇದೀಗ ಉಡುಪಿಯಲ್ಲಿ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಬಳಿಕ ಇದೀಗ ಮತ್ತೆ ಟಿಕೆಟ್ ನೀಡಲಾಗಿದೆ ಎಂದರು.
ಕಳೆದ 37 ವರ್ಷಗಳಿಂದ ಹಿಂದುತ್ವಕ್ಕಾಗಿ ದುಡಿದಿದ್ದೇನೆ. ಈಗಲೂ ಬಿಜೆಪಿ ಸಿದ್ಧಾಂತವನ್ನು ಬಿಟ್ಟಿಲ್ಲ. ಈಗ ನನ್ನನ್ನು ಜಾತಿವಾದಿ ಎಂದು ಆಪಾದಿಸಲಿ. ಇಂಥ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭ್ಯರ್ಥಿಗಳ ಜಯಕ್ಕಾಗಿ ದುಡಿಯಲು ಕಟಿಬದ್ಧನಾಗಿದ್ದೇನೆ ಎಂದು ಸತ್ಯಜಿತ್ ಹೇಳಿದರು.ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಹೂಗಾರ್, ಉಪಾಧ್ಯಕ್ಷ ಕೆ.ಪಿ. ಲಿಂಗೇಶ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ ಎಂ. ಅಮೀನ್, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಕೋಟೆ, ಮಂಗಳೂರು ಘಟಕದ ಸಂದೀಪ್ ಇದ್ದರು.-----------
ಶೂದ್ರನಾಗಿ ಹುಟ್ಟಿದ್ದರಿಂದ ಅವಕಾಶ ಸಿಗಲಿಲ್ಲ: ಸತ್ಯಜಿತ್ನಾನು ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಬಂಟ ಆಗಿರುತ್ತಿದ್ದರೆ ಬಿಜೆಪಿಯಲ್ಲಿ ಅವಕಾಶ ಸಿಗುತ್ತಿತ್ತೋ ಏನೋ? ಆದರೆ ನಾನು ಹುಟ್ಟಿದ್ದು ಶೂದ್ರ ಸಮಾಜದಲ್ಲಿ. ಶೂದ್ರ ಸಮಾಜ ಎಂದರೆ ಕೇವಲ ಸೇವೆ ಮಾಡಲು, ಗುಲಾಮಗಿರಿಗೆ ಮಾತ್ರ ಎಂದು ಗೊತ್ತಿರಲಿಲ್ಲ. ಜಾತಿ, ಬಡತನದಿಂದಾಗಿ ನನಗೆ ಬಿಜೆಪಿಯಲ್ಲಿ ಅವಕಾಶ ತಪ್ಪಿದೆ ಎಂದು ಸತ್ಯಜಿತ್ ಸುರತ್ಕಲ್ ಪ್ರತಿಕ್ರಿಯೆ ನೀಡಿದರು.-----------
ಪೂಜಾರಿ ಸೋಲಿಗೆ ನಾನೂ ಕಾರಣ!ಜನಾರ್ದನ ಪೂಜಾರಿ ಅವರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೆ ಇರಲು ನಾನೂ ಕೂಡ ಕಾರಣಕರ್ತ. ಆ ಸಮಯದಲ್ಲಿ ಎಲ್ಲ ಸಮಾಜಕ್ಕೆ ನ್ಯಾಯ ಸಿಗಲಿದೆ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಇತ್ತು. ಇದೇ ಜನಾರ್ದನ ಪೂಜಾರಿ ಅವರ ಸೋಲಿಗೆ ಕಾರಣವಾಯಿತು ಎಂದು ಸತ್ಯಜಿತ್ ಖೇದ ವ್ಯಕ್ತಪಡಿಸಿದರು.