ಗ್ರಾಮೀಣ ವರ್ಗದವರಿಗೆ ಕುಸ್ತಿ ಎನ್ನುವುದು ಜನಪ್ರಿಯ ಕ್ರೀಡೆಯಾಗಿದೆ. ಈ ಹಿಂದೆ ಇದ್ದಂತಹ ಗರಡಿ ಪರಂಪರೆ, ಪೈಲ್ವಾನ್ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವ ಕೆಲಸವಾಗಬೇಕು. ಪ್ರತಿ ವರ್ಷವೂ ದಸರಾ ಸಂದರ್ಭಲ್ಲಿ ಕುಸ್ತಿ ಪಂದ್ಯವನ್ನು ಏರ್ಪಡಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಅಂಗವಾಗಿ ಏರ್ಪಡಿಸಿದ್ದ 52 ಜೊತೆ ಪುರುಷ ಹಾಗೂ ಮಹಿಳಾ ಕಾಟಾ ಕುಸ್ತಿ ಪಂದ್ಯಾವಳಿ ಜನ ಮನ ಸೆಳೆಯಿತು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಸರಾ ನಾಡ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಪೈಲ್ವಾನರ ಬೆನ್ನುತಟ್ಟುವ ಮೂಲಕ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ವರ್ಗದವರಿಗೆ ಕುಸ್ತಿ ಎನ್ನುವುದು ಜನಪ್ರಿಯ ಕ್ರೀಡೆಯಾಗಿದೆ. ಈ ಹಿಂದೆ ಇದ್ದಂತಹ ಗರಡಿ ಪರಂಪರೆ, ಪೈಲ್ವಾನ್ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವ ಕೆಲಸವಾಗಬೇಕು. ಪ್ರತಿ ವರ್ಷವೂ ದಸರಾ ಸಂದರ್ಭಲ್ಲಿ ಕುಸ್ತಿ ಪಂದ್ಯವನ್ನು ಏರ್ಪಡಿಸಲಾಗುತ್ತಿದೆ ಎಂದರು.
ರಾಜ್ಯದ ಹುಬ್ಬಳ್ಳಿ, ಬೆಳಗಾಂ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು ಆಗಮಿಸಿ ಭಾಗಿಯಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇಂದಿಗೂ ಸಹ ಗರಡಿಗಳು ಅಸ್ತಿತ್ವದಲ್ಲಿದ್ದು, ಕುಸ್ತಿಪಟುಗಳು ಅಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿನ ಪೈಲ್ವಾನ್ಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ.ತಾಲೂಕಿನ ಬಾಬುರಾಯನಕೊಪ್ಪಲು, ಗಂಜಾಂ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಬೆಳಗಾಂ ಸೇರಿದಂತೆ ಇತರೆಡೆಗಳಿಂದ ಸುಮಾರು 52 ಕ್ಕೂ ಹೆಚ್ಚು ಕಾಟಾ ಕುಸ್ತಿ ಪೈಲ್ವಾನರು ಆಗಮಿಸಿದ್ದರು. ತಾಲೂಕು ಕ್ರೀಡಾಂಗಣದ ಮೈದಾನದಲ್ಲಿ ಸಿದ್ದಪಡಿಸಿದ್ದ ಕೆಮ್ಮಣ್ಣು ಮಟ್ಟಿಯ ಮೇಲೆ ನಿಂತ ಪೈಲ್ವಾನರುಗಳು ತಡೆ, ತೋಳು ತಟ್ಟಿ ತಮ್ಮ ಪಟ್ಟನ್ನು ಪ್ರದರ್ಶಿಸಿ, ಎದುರಾಳಿಯ ಮೈ ಮೇಲೆ ಬಿದ್ದು ಪರಸ್ಪರ ಗೆಲುವುಗಾಗಿ ಸೆಣಸಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮನುಜಶ್ರೀ, ತಹಸೀಲ್ದಾರ್ ಚೇತನಾ ಯಾದವ್, ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಪತ್ನಿ ಸುಮತಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್ ದಿನೇಶ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ನಂದೀಶ್, ಸಿಪಿಐ ಬಿ.ಜಿ ಕುಮಾರ್ ಸೇರಿದಂತೆ ಹೆಸರಾಂತ ಪೈಲ್ವಾನರುಗಳು ಇದ್ದರು.