ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಬಲವರ್ಧನೆಗೆ ಶ್ರಮಿಸಬೇಕು

| Published : Jan 27 2024, 01:16 AM IST

ಸಾರಾಂಶ

ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ. ನಾವು ಸಾಮರಸ್ಯದಿಂದ ಬದುಕುವ ಮೂಲಕ ಅಭಿವೃದ್ಧಿಪರವಾದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಬೇಕು. ಪ್ರತಿಯೊಬ್ಬರೂ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಅಭಿವೃದ್ಧಿಪಡಿಸಿ, ಸದೃಢ ಭಾರತ ನಿರ್ಮಾಣದ ಸಂಕಲ್ಪ ಕೈಗೊಳ್ಳಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ದೇಶದ ಪ್ರತಿಯೊಬ್ಬರೂ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಸದೃಢ ಭಾರತ ನಿರ್ಮಾಣದ ಸಂಕಲ್ಪ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.

ಪಟ್ಟಣದ ನೆಹರೂ ಮೈದಾನದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ. ನಾವು ಸಾಮರಸ್ಯದಿಂದ ಬದುಕುವ ಮೂಲಕ ಅಭಿವೃದ್ಧಿಪರವಾದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಬಲಿಷ್ಟವಾಗಿದೆ. ನಮ್ಮ ಸಂವಿಧಾನವೇ ನಮ್ಮ ಶಕ್ತಿಯಾಗಿದ್ದು ಸದೃಢ ಭಾರತದ ಅಡಿಪಾಯವಾಗಿದೆ. ಸಂವಿಧಾನದಲ್ಲಿ ನಮ್ಮ ಹಕ್ಕಿನ ಜೊತೆಗೆ ಕರ್ತವ್ಯವನ್ನು ನೀಡಲಾಗಿದ್ದು ಅದನ್ನು ಪಾಲನೆ ಮಾಡಬೇಕು. ಸಾಗರ ಕ್ಷೇತ್ರದ ಅಭಿವೃದ್ದಿಗೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯ್ಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಪಂ ಇಒ ನಾಗೇಶ್ ಬ್ಯಾಲದ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಇನ್ನಿತರರು ಹಾಜರಿದ್ದರು. ಅನಂತರ ಆರಕ್ಷಕ, ಗೃಹರಕ್ಷಕ, ಅರಣ್ಯ ಇಲಾಖೆ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಹಾಗೂ ವಿವಿಧ ಶಾಲಾ ತುಕಡಿಗಳಿಂದ ಪಥಸಂಚಲನ ಮತ್ತು ಆಕರ್ಷಕ ಕವಾಯತು ನಡೆಯಿತು.

ಶಾಶ್ವತ ಧ್ವಜಸ್ತಂಭದಲ್ಲಿ ಧ್ವಜಾರೋಹಣ:

ಸಾಗರ ಪಟ್ಟಣದ ಗಣಪತಿಕೆರೆ ಪಕ್ಕದ ಶಾಶ್ವತ ಧ್ವಜಸ್ತಂಭದ ಸ್ಥಳದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇಂದು ಒಕ್ಕೂಟದ ವ್ಯವಸ್ಥೆಗೆ ನಾವು ತೆರೆದುಕೊಂಡ ಪವಿತ್ರ ದಿನವಾಗಿದೆ. ಸಮಸ್ತ ಭಾರತೀಯರು ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ದೇಶವು ಸ್ವತಂತ್ರವಾಗಲು ತ್ಯಾಗ, ಬಲಿದಾನ ಮಾಡಿದವರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಪೌರಾಯುಕ್ತ ಎಚ್.ಕೆ. ನಾಗಪ್ಪ ಮಾತನಾಡಿದರು. ಉಪವಿಭಾಗಾಧಿಕಾರಿ ಆರ್.ಯತೀಶ್ , ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯ್ಕ್ ಇನ್ನಿತರರು ಹಾಜರಿದ್ದರು.

- - -

-26ಕೆ.ಎಸ್.ಎ.ಜಿ.1:

ಸಾಗರ ಗಣರಾಜ್ಯೋತ್ಸವದಲ್ಲಿ ಎಸಿ ಆರ್.ಯತೀಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.