ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಪ್ರಮುಖ ಹೋಬಳಿಯಾಗಿರುವ ದಂಡಿನಶಿವರದಲ್ಲಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಬಸ್ ನಿಲ್ದಾಣ ಮಾಡಬೇಕೆಂಬ ಹೆಬ್ಬಯಕೆ ತಮ್ಮಲ್ಲಿ ಇದೆ. ಆದರೆ ನಿವೇಶನದ ಸಮಸ್ಯೆ ಇರುವುದರಿಂದ ತಡವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲೂಕಿನ ದಂಡಿನಶಿವರದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್‌ ಸಂಕಲ್ಪ ವತಿಯಿಂದ ನಿರ್ಮಿಸಿರುವ ಪ್ರಯಾಣಿಕರ ನೂತನ ವಿಶ್ರಾಂತಿ ತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದಂಡಿನಶಿವರ ಹೋಬಳಿ ಕೇಂದ್ರದಲ್ಲಿ ಉತ್ತಮ ಬಸ್ ನಿಲ್ದಾಣ ಅವಶ್ಯಕವಾಗಿ ಬೇಕಾಗಿದೆ. ಸ್ಥಳಾವಕಾಶ ಕೊರತೆಯಿಂದ ಬಸ್ ನಿಲ್ದಾಣ ಇದುವರೆವಿಗೂ ಮಾಡಲಾಗಿಲ್ಲ. ಹಾಲಿ ಬಸ್ ಗಳು ನಿಲ್ಲುತ್ತಿರುವ ಸ್ಥಳ ಶಿಕ್ಷಣ ಇಲಾಖೆಗೆ ಸೇರಿದೆ. ಶಿಕ್ಷಣ ಇಲಾಖೆಯವರು ಜಮೀನು ನೀಡಿದರೆ ಸಾರಿಗೆ ಸಚಿವರ ಹತ್ತಿರ ಮಾತನಾಡಿ 2 ಕೋಟಿ ರು. ವೆಚ್ಚದಲ್ಲಿ ಉತ್ತಮವಾದ ಬಸ್ ನಿಲ್ದಾಣ ಮಾಡಲಾಗುವುದು. ಈ ಜಮೀನನ್ನು ಶಿಕ್ಷಣ ಇಲಾಖೆಯಿಂದ ಕೆ ಎಸ್ ಆರ್ ಟಿಸಿಗೆ ನೀಡಲು ಶಿಕ್ಷಣ ಸಚಿವರ ಹತ್ತಿರ ಮಾತನಾಡಿ ವರ್ಗಾವಣೆ ಮಾಡಿಸಿ ನಂತರ ಬಸ್ ನಿಲ್ದಾಣ ಮಾಡಲು ರೂಪ ರೇಷೆ ಸಿದ್ದಪಡಿಸಲಾಗುವುದು ಎಂದರು. ಈ ಸರ್ಕಾರದಲ್ಲಿ ಇದು ಸುಲಭದ ಮಾತಲ್ಲ ನೋಡೋಣ ಪ್ರಯತ್ನಿಸುವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಸಂಘಟನೆಯಾದ ಇನ್ನರ್ ವೀಲ್ ಕ್ಲಬ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಸಂಸಾರದ ಒತ್ತಡದಲ್ಲಿಯೂ ಸಮಾಜ ಸೇವೆ ಮಾಡುತ್ತಿದ್ದಾರೆ. ಜನಪರವಾದ ಕಾರ್ಯಕ್ರಮಗಳ ಜೊತೆಗೆ ತಾಲೂಕಿನಲ್ಲಿ ಮೂರು ಪ್ರಯಾಣಿಕರ ವಿಶ್ರಾಂತಿ ತಾಣವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ವಿಶ್ರಾಂತಿ ತಾಣದಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಂತಹ ಜನಪರ ಕಾರ್ಯಕ್ರಮಗಳನ್ನು ಹೆಚ್ಚು ಮಾಡಲಿ ನಾನು ಸಹ ಸಹಕಾರ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಅಧ್ಯಕ್ಷೆ ಇಂದಿರಾ ಪ್ರಭಾಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊನ್ನಾಂಬ ದೇವಾಲಯದ ಗುಡಿಗೌಡರಾದ ಸಿದ್ದೇಗೌಡ, ಮುಖಂಡ ಶಂಕರೇಗೌಡ, ಇನ್ನರ್ ವೀಲ್ ಕ್ಲಬ್ ಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಗೌರವ ಸಲಹೆಗಾರರು ಡಾ.ಆಶಾಚೌದ್ರಿ, ದಂಡಿನಶಿವರ ಪಿಡಿಒ ಸಾವಿತ್ರಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಗುಪ್ತಾ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎನ್.ಆರ್. ಜಯರಾಮ್, ಗ್ಯಾಸ್ ಪ್ರಭು, ಇನ್ನರ್ ವೀಲ್ ಕಾರ್ಯದರ್ಶಿ ಮಮತ ಅಶೋಕ್, ಸ್ವಾಗತ ಸಮಿತಿ ಅಧ್ಯಕ್ಷೆ ಲತಾ ಪ್ರಸನ್ನಕುಮಾರ್ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.