ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ

| Published : Dec 27 2023, 01:30 AM IST

ಸಾರಾಂಶ

ನೂತನ ಪದಾಧಿಕಾರಿಗಳಿಂದ ಸತ್ಕಾರ ಸ್ವೀಕರಿಸಿ ಭರವಸೆ ನೀಡಿದ ಮಾಜಿ ಸಂಸದ ರಮೇಶ ಕತ್ತಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮಾಡುವೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪಟ್ಟಣದ ಹೊರವಲಯದ ಕ್ಯಾರಗುಡ್ ಬಳಿ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 5 ಎಕರೆ ಜಾಗ ಹಂಚಿಕೆಯಾಗಿದ್ದು ಶೀಘ್ರವೇ ಕಟ್ಟಡಕ್ಕೆ ಬೇಕಾದ ಅಗತ್ಯ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿ ಗೃಹ ಕಚೇರಿಯಲ್ಲಿ ಮಂಗಳವಾರ ವಕೀಲರ ಸಂಘದ ನೂತನ ಪದಾಧಿಕಾರಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, 5 ಎಕರೆ ಪ್ರದೇಶದಲ್ಲಿ ಸುಸಜ್ಜಿತ ನ್ಯಾಯಾಲಯ ಕಟ್ಟಡ, ವಕೀಲರ ಭವನ, ಇ-ಲೈಬ್ರರಿ ಹಾಗೂ ನ್ಯಾಯಾಧೀಶರ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಿಸಲಾಗುವುದು ಎಂದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಹಿರಿಯ ಮತ್ತು ಕಿರಿಯ ವಕೀಲರೆಲ್ಲರೂ ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಈ ಮೂಲಕ ಮುಂಬರುವ ದಿನಗಳಲ್ಲಿ ಹುಕ್ಕೇರಿ ವಕೀಲರ ಸಂಘದ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಅವರು ಸಲಹೆ ಮಾಡಿದರು.

ನೂತನ ಅಧ್ಯಕ್ಷ ಅನೀಸ್ ವಂಟಮೂರಿ, ನಿಕಟಪೂರ್ವ ಅಧ್ಯಕ್ಷ ರಾಜೀವ ಚೌಗಲಾ ಮಾತನಾಡಿ, ವಕೀಲರ ಸಂಘದ ಶ್ರೇಯೋಭಿವೃದ್ಧಿಗೆ ಕತ್ತಿ ಕುಟುಂಬ ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ. ಮಗೆನ್ನವರ, ಐ.ಕೆ.ಹೂಲಿಕಟ್ಟಿ, ಐ.ಬಿ.ಅಮ್ಮಣಗಿ, ಎ.ಎಸ್.ಹುಲ್ಲೋಳಿ, ಪ್ರಕಾಶ ಪಾಟೀಲ, ಸುಕುಮಾರ ಮುನ್ನೋಳಿ, ಮುಖಂಡ ಅಪ್ಪಾಸಾಹೇಬ ಸಂಕನ್ನವರ ಮತ್ತಿತರರು ಇದ್ದರು.