ಸಾರಾಂಶ
ಬಾಗೇಪಲ್ಲಿಯಿಂದ ಶಿಡ್ಲಘಟ್ಟ ಗಡಿವರೆಗೂ ಈಗಾಗಲೇ ಸುಮಾರು 25 ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಂದು ಚಾಲನೆ ನೀಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಲಿದೆ.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.7 ಕೋಟಿ ರು.ಗಳ ವೆಚ್ಚದಲ್ಲಿ ಬಾಗೇಪಲ್ಲಿಯಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 54ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಹಾಗೂ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿ ಪೂರ್ಣಗೊಂಡಿದೆ. ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಬಾಗೇಪಲ್ಲಿಯಿಂದ ಚಿಂತಾಮಣಿಗೆ ಸಂರ್ಪಕ ಕಲ್ಪಿಸುವ ರಸ್ತೆ 7 ಕೋಟಿ ರು.ಗಳ ವೆಚ್ಚದಲ್ಲಿ 2025ರ ಮಾರ್ಚ್ ವೇಳೆಗೆ ಸುಸಜ್ಜಿತ ರಸ್ತೆಯಾಗಿ ನಿರ್ಮಾಣವಾಗಲಿದೆ ಎಂದರು.
ಬಾಗೇಪಲ್ಲಿಯಿಂದ ಶಿಡ್ಲಘಟ್ಟ ಗಡಿವರೆಗೂ ಈಗಾಗಲೇ ಸುಮಾರು 25 ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಂದು ಚಾಲನೆ ನೀಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಲಿದೆ. ಮೀಟ್ಟೇಮರಿ ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣ ಕೆಲಸ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ವಿಭಜಕ ನಿರ್ಮಾಣ ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಅಲ್ಲದೆ, ಮುಖ್ಯ ರಸ್ತೆಗಳ ಜೊತೆಗೆ ಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.ಮಾಜಿ ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ಮುಖಂಡರಾದ ಪಿ.ಮಂಜುನಾಥರೆಡ್ಡಿ, ಮಾಜಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ರಾಘವೇಂದ್ರ, ಕಾಮಿರೆಡ್ಡಿ ಮತ್ತಿತರರು ಇದ್ದರು.