ಹಾವೇರಿ ವಿಶ್ವವಿದ್ಯಾಲಯಕ್ಕೆ ಹೊಸ ಕಾಯಕಲ್ಪ ನೀಡಲು ಪ್ರಯತ್ನ-ಶಾಸಕ ಶಿವಣ್ಣನವರ

| Published : Jan 26 2025, 01:33 AM IST

ಹಾವೇರಿ ವಿಶ್ವವಿದ್ಯಾಲಯಕ್ಕೆ ಹೊಸ ಕಾಯಕಲ್ಪ ನೀಡಲು ಪ್ರಯತ್ನ-ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ನೂತನವಾಗಿ ಸ್ಥಾಪನೆಯಾಗಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಹೊಸ ಕಾಯಕಲ್ಪ ಕೊಟ್ಟು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಖ್ಯಾತಿ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ವಿಶ್ವಾಸದೊಂದಿಗೆ ಶ್ರಮಿಸಲಾಗುವುದು ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಹಾವೇರಿ: ನೂತನವಾಗಿ ಸ್ಥಾಪನೆಯಾಗಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಹೊಸ ಕಾಯಕಲ್ಪ ಕೊಟ್ಟು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಖ್ಯಾತಿ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ವಿಶ್ವಾಸದೊಂದಿಗೆ ಶ್ರಮಿಸಲಾಗುವುದು ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಪ್ರಗತಿ, ಸಾಧನೆ ಮತ್ತು ಬೆಳವಣಿಗೆಗಳ ಕುರಿತಾದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ವಿಶ್ವವಿದ್ಯಾಲಯ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ. ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದು ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಅವರ ಕಾಲದಲ್ಲಿ 42ಎಕರೆ ಪ್ರದೇಶದಲ್ಲಿ ಪಿಜಿ ಸೆಂಟರ್‌ನ್ನು ಸ್ಥಾಪಿಸಲಾಗಿತ್ತು. ಮಾಜಿ ಸಿಎಂ ಬೊಮ್ಮಾಯಿ ಅವರು ಜಿಲ್ಲೆಗೊಂದು ವಿಶ್ವವಿದ್ಯಾಲಯವೆಂದು ತಮ್ಮ ಅವಧಿಯಲ್ಲಿ ಹಾವೇರಿ ಸೇರಿದಂತೆ ರಾಜ್ಯದಲ್ಲಿ 7 ಹೊಸ ವಿಶ್ವ ವಿದ್ಯಾಲಯಗಳನ್ನು ಘೋಷಣೆ ಮಾಡಿದ್ದರು. ಈಗ ವಿವಿಗೆ ಹೊಸ ಕಾಯಕಲ್ಪ ನೀಡುತ್ತೇವೆ ಎಂದರು.ಹಾವೇರಿ ವಿವಿ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು. ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ಹೊಸಳ್ಳಿ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತೇವೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಸತಿ ನಿಲಯದ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಆದ್ಯತೆ ನೀಡಲಾಗುತ್ತದೆ. ಹೊಸ ಹೊಸ ಕೌಶಲ್ಯ ತರಬೇತಿ ಹಾಗೂ ವೃತ್ತಿಪರವಾದ ಕೋರ್ಸ್ ಆರಂಭಕ್ಕೆ ಆದ್ಯತೆ ನೀಡಲು ಕುಲಪತಿಗಳಿಗೆ ಸೂಚಿಸಿದ ಅವರು, ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದರು.ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆ ಪ್ರಮುಖ ಪಾತ್ರ ವಹಿಸಿದೆ. ಕವಿವಿಯಿಂದ ಬೇರ್ಪಟ್ಟು ಹಾವೇರಿ ಸ್ವತಂತ್ರ ವಿಶ್ವವಿದ್ಯಾಲಯವಾಗಿದೆ. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೊಸ ವಿವಿ ಬಗ್ಗೆ ಮಾಸ್ಟರ್‌ಪ್ಲ್ಯಾನ್ ಮಾಡಿ ಘೋಷಣೆ ಮಾಡಿದ್ದರೆ, ವಿಶ್ವವಿದ್ಯಾಲಯ ಇನ್ನಷ್ಟು ಅಭಿವೃದ್ಧಿ ಕಾಣುತ್ತಿತ್ತು. ಆದರೂ ಕಾಲ ಮಿಂಚಿಲ್ಲ. ಶೈಕ್ಷಣಿಕ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ವಿಶ್ವ ವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಶಾಸಕರು ಕೈಜೋಡಿಸಿ, ಸಂಬAಧಪಟ್ಟ ಸಚಿವರ ಜತೆಗೆ ಚರ್ಚಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹಾವೇರಿ ವಿವಿ ಸ್ಥಾಪಿಸಲಾಗಿದೆ. ಉದ್ಯೋಗಾಧಾರಿತ ಪದವಿ ಕೋರ್ಸ್ಗಳನ್ನು ಆರಂಭ ಮಾಡಬೇಕು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಿಲ್ಲೆಯ ಯುವ ಸಮುದಾಯದಲ್ಲಿ ಜಾಗೃತಿ ಕೊರತೆ ಇದ್ದು, ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಐಟಿಐ ಸೇರಿದಂತೆ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭಿಸಬೇಕು. ಎಲ್ಲಾ ಶಾಸಕರೊಂದಿಗೆ ಕೈಜೋಡಿಸಿ ವಿವಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ಶಾಸಕರಿಗೆ ಬೇಡಿಕೆ: ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಅವರು, ವಿವಿ ಅಧೀನದಲ್ಲಿ 44 ಕಾಲೇಜುಗಳು ಬರುತ್ತಿದ್ದು, ಈ ಪೈಕಿ 15,468 ಪದವಿ ಹಾಗೂ 733 ಸ್ವಾತಕೋತ್ತರ ಪದವಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ ಎಂದರು.ಹಾವೇರಿ ವಿವಿಗೆ ಪ್ರತ್ಯೇಕ ಗ್ರಂಥಾಲಯ ಕಟ್ಟಡ, ಎರಡನೇ ಮಹಡಿ ಕಟ್ಟಡ ನಿರ್ಮಾಣ, ಕಂಪೌಂಡ ನಿರ್ಮಾಣ, ಕ್ರೀಡಾ ಮೈದಾನ, ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ, ಸಭಾಭವನ, ಕಂಪ್ಯೂಟರ್ ಪ್ರಯೋಗಾಲಯದ ಅಭಿವೃದ್ಧಿ ಸೇರಿ ಸರ್ವಾಂಗೀಣ ಅಭಿವೃದ್ಧಿ ಮಾಡಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು. ಸಭೆಯಲ್ಲಿ ಕುಲಸಚಿವ ಪ್ರೊ. ಎಸ್.ಟಿ ಬಾಗಲಕೋಟೆ, ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮಿ ತಿರ್ಲಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.