ವಸತಿ ಯೋಜನೆಗೆ ನೀಡುವ ಸಹಾಯಧನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ

| Published : Apr 13 2025, 02:04 AM IST

ವಸತಿ ಯೋಜನೆಗೆ ನೀಡುವ ಸಹಾಯಧನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 18 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಗಳಿಗೆ ಕನಿಷ್ಟ ₹70 ರಿಂದ ₹ 80 ಸಾವಿರ ಆರ್ಥಿಕ ನೆರವು ಲಭಿಸಿದೆ. ಗೃಹಲಕ್ಷ್ಮೀ ಯೋಜನೆಯೊಂದನ್ನು ಹೊರತು ಪಡಿಸಿದರೆ ಉಳಿದ ಯೋಜನೆಗಳ ಮೂಲಕ ಪುರುಷರಿಗೂ ನೆರವು ಸಿಗುತ್ತಿದೆ

ಹಾನಗಲ್ಲ: ದೇಶದ ಯಾವುದೇ ಕುಟುಂಬ ಸೂರಿಲ್ಲದೆ ಇರಬಾರದು, ಹಸಿವಿನಿಂದ ಬಳಲಬಾರದು, ಬಡತನದಿಂದ ಹೊರಬರಬೇಕು ಎಂಬ ದೃಢ ಸಂಕಲ್ಪದಿಂದ ಆಶ್ರಯ ವಸತಿ, ಪಡಿತರ ಯೋಜನೆ ಆರಂಭಿಸಿದ ಅಂದಿನ ಪ್ರಧಾನಿ ದಿ.ಇಂದಿರಾಗಾಂಧಿ ಗರೀಭಿ ಹಠಾವೋ ಘೋಷಣೆಯ ಮೂಲಕ ದೇಶದ ಇತಿಹಾಸದಲ್ಲಿ ದಿಟ್ಟ ಹೆಜ್ಜೆ ಹಾಕಿ ಮುನ್ನಡೆದರು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಶನಿವಾರ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅರಳೇಶ್ವರ, ಡೊಳ್ಳೇಶ್ವರ, ಆಲದಕಟ್ಟಿ, ಕಂಚಿನೆಗಳೂರು, ಬಾಳಂಬೀಡ ಮತ್ತು ಬೆಳಗಾಲಪೇಟೆ ಗ್ರಾಪಂ ವ್ಯಾಪ್ತಿಯ ಒಟ್ಟು 207 ಫಲಾನುಭವಿಗಳಿಗೆ 2024-25 ನೇ ಸಾಲಿನ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಕಾರ್ಯಾದೇಶ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಾರೊಬ್ಬರೂ ಕೂಡ ಹಸಿವಿನಿಂದ ಬಳಲಬಾರದು ಎಂಬುದಕ್ಕಾಗಿ ಪಡಿತರ ವಿತರಣೆ ವ್ಯವಸ್ಥೆಯನ್ನೂ ಇಂದಿರಾ ಗಾಂಧಿ ಜಾರಿಗೆ ತಂದರು. ಮುಂದೆ ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ದಿಲ್ಲಿಯಿಂದ ಕಳಿಸಿದ ಹಣ, ಹಳ್ಳಿಗಳಿಗೆ ತಲುಪಬೇಕು. ಹಾಗಾಗಿ ಊರಿನ ಆಡಳಿತ ಊರಿನವರ ಕೈಯಲ್ಲಿಯೇ ಇರಬೇಕು ಎಂದು ಆಡಳಿತ ವಿಕೇಂದ್ರೀಕರಣ ಜಾರಿಗೆ ತಂದು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿದರು ಎಂದರು.

ಕಳೆದ 18 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಗಳಿಗೆ ಕನಿಷ್ಟ ₹70 ರಿಂದ ₹ 80 ಸಾವಿರ ಆರ್ಥಿಕ ನೆರವು ಲಭಿಸಿದೆ. ಗೃಹಲಕ್ಷ್ಮೀ ಯೋಜನೆಯೊಂದನ್ನು ಹೊರತು ಪಡಿಸಿದರೆ ಉಳಿದ ಯೋಜನೆಗಳ ಮೂಲಕ ಪುರುಷರಿಗೂ ನೆರವು ಸಿಗುತ್ತಿದೆ. ತಾಲೂಕಿನಲ್ಲಿ 1,350 ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ವಸತಿ ಯೋಜನೆಗಳಡಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.

ತಾಪಂ ಇಒ ಪರಶುರಾಮ ಪೂಜಾರ ಮಾತನಾಡಿ, ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಹಾನಗಲ್ ತಾಲೂಕಿನ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ನೀಡಲಾಗುತ್ತಿದೆ. ಕಾರ್ಯಾದೇಶ ಪತ್ರ ಪಡೆದ ಫಲಾನುಭವಿಗಳು ಮಳೆ ಆರಂಭದ ಹೊತ್ತಿಗೆ ಮನೆ ನಿರ್ಮಾಣ ಮಾಡಿಕೊಂಡು ಸರ್ಕಾರದ ಯೋಜನೆ ಯಶಸ್ವಿಗೊಳಿಸುವಂತೆ ಹೇಳಿದರು.

ಗ್ರಾಪಂ ಅಧ್ಯಕ್ಷ ರಾಮಪ್ಪ ಕುರಿಯವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜವ್ವ ತೋಟದ, ಬೆಳಗಾಲಪೇಟೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಬ್ಯಾಲಾಳ, ಉಪಾಧ್ಯಕ್ಷೆ ಅಮೀನಾಬಿ, ಕಂಚಿನೆಗಳೂರು ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ಉಪಾಧ್ಯಕ್ಷೆ ಲಲಿತಾ ಪತ್ತಾರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಚಂದ್ರಶೇಖರ ಗೂಳಿ, ಕೊಟ್ರಪ್ಪ ಅಂಗಡಿ, ಲಿಂಗರಾಜ ಮಡಿವಾಳರ, ಪ್ರಶಾಂತ ಕಾಡಪ್ಪನವರ, ವಿರುಪಾಕ್ಷಪ್ಪ ತಳವಾರ, ಪ್ರಶಾಂತ ಕಾಡಪ್ಪನವರ ಈ ಸಂದರ್ಭದಲ್ಲಿ ಇದ್ದರು.

ಬಡವರನ್ನು ಗುರುತಿಸಿ ಸೂರು ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮಾಹಿತಿಯ ಕೊರತೆಯಿಂದ ಅರ್ಹ ಫಲಾನುಭವಿಗಳು ವಸತಿ ರಹಿತರ ಪಟ್ಟಿಯಿಂದ ಹೊರಗುಳಿಯುತ್ತಿದ್ದು, ಅಂಥವರಿಗೆ ಮಾಹಿತಿ ನೀಡಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದ್ದಾರೆ.