ಮದ್ದೂರು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮ: ಶಾಸಕ ಕೆ.ಎಂ.ಉದಯ್

| Published : Sep 03 2025, 01:00 AM IST

ಸಾರಾಂಶ

ಕಪರೆಕೊಪ್ಪಲು ಹಾಗೂ ಭುಜುವಳ್ಳಿ ಗ್ರಾಮಗಳು ತಾಲೂಕಿನ ಕೊನೆ ಭಾಗದಲ್ಲಿದ್ದು ಅಭಿವೃದ್ಧಿ ಕಾಣದೆ ಹಿಂದುಳಿದ್ದವು. ರಸ್ತೆ ಮತ್ತು ಚರಂಡಿಗಳು ತೀರಾ ಹದಗೆಟ್ಟಿದ್ದರಿಂದ ಗ್ರಾಮಸ್ಥರು ಮನವಿ ಮೇರೆಗೆ ಪ್ರಾಥಮಿಕ ಹಂತ ಸುಮಾರು 25 ಲಕ್ಷ (ಕಪರೆಕೊಪ್ಪಲು) 20 ಲಕ್ಷ ( ಭುಜವಳ್ಳಿ ) ಗ್ರಾಮಗಳ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮದ್ದೂರು ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮಗಳ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಕಾಡುಕೊತ್ತನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಡುಕೊತ್ತನಹಳ್ಳಿ, ಕಪರೆಕೊಪ್ಪಲು, ಭುಜುವಳ್ಳಿ ಗ್ರಾಮದಲ್ಲಿ ಸುಮಾರು 90 ಲಕ್ಷ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಯಾಗುವ ಮೊದಲು ಗ್ರಾಮಗಳಿಗೆ ಭೇಟಿ ನೀಡಿದಾಗ ಸೂಕ್ತ ರಸ್ತೆ ಮತ್ತು ಚರಂಡಿಗಳಿಲ್ಲದೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದನ್ನು ಕಂಡಿದ್ದು, ಶಾಸಕನಾಗಿ ಆಯ್ಕೆಯಾದ ಮೇಲೆ ಸರ್ಕಾರದಿಂದ ಸುಮಾರು 1500 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ಕಪರೆಕೊಪ್ಪಲು ಹಾಗೂ ಭುಜುವಳ್ಳಿ ಗ್ರಾಮಗಳು ತಾಲೂಕಿನ ಕೊನೆ ಭಾಗದಲ್ಲಿದ್ದು ಅಭಿವೃದ್ಧಿ ಕಾಣದೆ ಹಿಂದುಳಿದ್ದವು. ರಸ್ತೆ ಮತ್ತು ಚರಂಡಿಗಳು ತೀರಾ ಹದಗೆಟ್ಟಿದ್ದರಿಂದ ಗ್ರಾಮಸ್ಥರು ಮನವಿ ಮೇರೆಗೆ ಪ್ರಾಥಮಿಕ ಹಂತ ಸುಮಾರು 25 ಲಕ್ಷ (ಕಪರೆಕೊಪ್ಪಲು) 20 ಲಕ್ಷ ( ಭುಜವಳ್ಳಿ ) ಗ್ರಾಮಗಳ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಲಾಗಿದೆ. ಮುಂದಿನ ಹಂತದಲ್ಲಿ ಸರಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ಈ ಎರಡು ಗ್ರಾಮಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕಾಡುಕೊತ್ತನಹಳ್ಳಿ ರಸ್ತೆ ಮತ್ತು ಚರಂಡಿಗಳು ದುರಸ್ತಿಯಾಗಿದೆ. ಕೆಲವು ದಿನಗಳ ಹಿಂದೆ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್‌ಸಿಪಿ ಯೋಜನೆಯಡಿ ಸುಮಾರು 1 ಕೋಟಿ ರು. ವೆಚ್ಚದಲ್ಲಿ ರಸ್ತೆ ಚರಂಡಿ ಕಾಮಗಾರಿ ಚಾಲನೆ ನೀಡಿದ್ದೆ. ಕಾಮಗಾರಿ ಅರ್ಧಭಾಗ ಮುಗಿದಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಾಲಾಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮದ ಮೊದಲ ವಾರ್ಡ್ ನಲ್ಲಿ ರಸ್ತೆ ಮತ್ತು ಚರಂಡಿಗಳು ಅಭಿವೃದ್ಧಿಯನ್ನೇ ಕಾಣದೇ ಹಿಂದುಳಿದಿದ್ದು, 45 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.

ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ಗ್ರಾಪಂ ಅಧ್ಯಕ್ಷ ಜಯರಾಜು, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ವೀರಭದ್ರ ಚಿಕ್ಕರಾಜಯ್ಯ, ಸೊಸೈಟಿ ಅಧ್ಯಕ್ಷ ಮರಿಸಿದ್ದಯ್ಯ, ಮುಖಂಡರಾದ ಚಿದಂಬರ ಮೂರ್ತಿ, ರಾಜು, ಚಿಕ್ಕಲಿಂಗಯ್ಯ ಮಾದೇಗೌಡ, ಪೂಜಾರಿ ಮಹೇಶ್, ಭೂಮಿ ಸಿದ್ಧಯ್ಯ, ದಯಾನಂದ, ಈ. ರುದ್ರಯ್ಯ, ಈ ರಾಜು ಸೇರಿದಂತೆ ಹಲವರು ಇದ್ದರು.