ಹೆಸರಿನಲ್ಲಿ ವ್ಯತ್ಯಾಸ, ಗೈರು ಹಾಜರಿ ಸೇರಿದಂತೆ 60,011 ಮತದಾರರರಿಗೆ ನೋಟಿಸ್ ಕಳುಹಿಸಲು ಗುರುತಿಸಲಾಗಿತ್ತು
ಹಾವೇರಿ: ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಬಿಎಲ್‌ಒಗಳು ಸಮನ್ವಯೊಂದಿಗೆ ದೋಷರಹಿತ ಮತದಾರರ ಪಟ್ಟಿ ತಯಾರಿಕೆಯ ವಿವಿಧ ಕಾರ್ಯಚಟುವಟಿಕೆ ಚುರುಕಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸಂಬಂಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.23 ಕಾಲಾವಕಾಶವಿದೆ ಎಂದು ತಿಳಿಸಿದರು.ಹೆಸರಿನಲ್ಲಿ ವ್ಯತ್ಯಾಸ, ಗೈರು ಹಾಜರಿ ಸೇರಿದಂತೆ 60,011 ಮತದಾರರರಿಗೆ ನೋಟಿಸ್ ಕಳುಹಿಸಲು ಗುರುತಿಸಲಾಗಿತ್ತು. ಈವರೆಗೆ 50,310 ಜನರಿಗೆ ನೋಟಿಸ್ ಕಳುಹಿಸಲಾಗಿದೆ. 9,701 ಮತದಾರರಿಗೆ ನೋಟಿಸ್ ರವಾನೆ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 13,058 ಜನರ ಹೇರಿಂಗ್ ಆಗಿದೆ, 2,724 ಜನರು ಹೇರಿಂಗ್‌ಗೆ ಗೈರು ಹಾಜರಾಗಿದ್ದಾರೆ. ಅವರಿಗೆ ಪುನಃ ಹೇರಿಂಗ್ ದಿನಾಂಕ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಅರ್ಹ ಹಾಗೂ ಯುವ ಮತದಾರರ ನೋಂದಣಿಗೆ ಸೆ.19 ಹಾಗೂ 20ರಂದು ಎರಡು ದಿನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಂದ ಪ್ರಭಾತಪೇರಿ ಆಯೋಜಿಸಲಾಗುತ್ತಿದೆ. ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಹಕ್ಕು ಆಕ್ಷೇಪಣೆ ಸಮಯದಲ್ಲಿ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-6ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಒದಗಿಸಬೇಕು. ಸಾರ್ವಜನಿಕರು ಮೊಬೈಲ್ ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದಲ್ಲಿ VHA App (Voter Helpline Application) ನ್ನು ಡೌನಲೋಡ್ ಮಾಡಿಕೊಂಡು ಅದರ ಮೂಲಕವು ಅರ್ಜಿ ನಮೂನೆ-6, 7 ಮತ್ತು 8ನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ 6 ವಿಧಾಸಭಾ ಕ್ಷೇತ್ರಗಳ ಮತಗಟ್ಟೆಗಳ ವಿಧಾನಸಭಾವಾರು ವಿವರದ ಪಟ್ಟಿಯನ್ನು ಜಿಲ್ಲಾ ವೆಬ್ ಸೈಟ್ haveri.nic.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದರು.
ಸ್ವೀಕೃತವಾದ ನಮೂನೆಗಳ ವಿವರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ 2026 ಜೂ.16ರಿಂದ ಸೆ.8ರ ವರೆಗೆ ನಮೂನೆ-06, ನಮೂನೆ-7 ಹಾಗೂ ನಮೂನೆ 8 ಸೇರಿ 21,755 ಅರ್ಜಿ ಸ್ವೀಕರಿಸಲಾಗಿದೆ ಎಂದರು.ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಚುನಾವಣಾ ತಹಸೀಲ್ದಾರ ಅಮೃತಗೌಡ ಪಾಟೀಲ, ಪಿ.ಸಿ. ಜಾಬೀನ್, ಅಮೀರಜಾನ್ ಬೇಪಾರಿ, ಹನುಮಂತಪ್ಪ ಕಬ್ಬಾರ ಇತರರು ಉಪಸ್ಥಿತರಿದ್ದರು.