ಸಾರಾಂಶ
ಕಳೆದ 40-50 ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ದಾಖಲೆ ಹೊಂದದೇ ಇರುವ ಹಾನಗಲ್ಲ ತಾಲೂಕಿನ ಶಂಕರಿಕೊಪ್ಪದ 50ಕ್ಕೂ ಹೆಚ್ಚು ಕುಟುಂಬದವರು ಶಾಸಕ ಶ್ರೀನಿವಾಸ ಮಾನೆ ಅವರನ್ನು ಭೇಟಿ ಮಾಡಿ ಹಕ್ಕುಪತ್ರ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಹಾನಗಲ್ಲ: ಕಳೆದ 40-50 ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ದಾಖಲೆ ಹೊಂದದೇ ಇರುವ ತಾಲೂಕಿನ ಸುಮಾರು 13,600 ಕುಟುಂಬಗಳಿಗೆ ಮನೆ ಮಾಲೀಕತ್ವದ ಹಕ್ಕುಪತ್ರ ದೊರಕಿಸುವ ಪ್ರಯತ್ನ ಅಂತಿಮ ಹಂತದಲ್ಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಕ್ಕುಪತ್ರ ದೊರಕಿಸುವಂತೆ ತಾಲೂಕಿನ ಶಂಕರಿಕೊಪ್ಪ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು. ತೊಡಕು ನಿವಾರಿಸಿ, ಕಾನೂನಿನಲ್ಲಿರುವ ಅವಕಾಶ ಬಳಸಿ ಹಕ್ಕುಪತ್ರ ದೊರಕಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ರಚಿಸಲಾಗುತ್ತಿದೆ. ಈ ಕೆಲಸ ಕೆಲ ತಿಂಗಳಲ್ಲಿ ಆಗುವಂಥದ್ದಲ್ಲ. ಸತತವಾಗಿ ಬೆನ್ನು ಬಿದ್ದು ಸುದೀರ್ಘ ಕಾಲದಿಂದ ಆಗದೇ ಇರುವ ಕೆಲಸವನ್ನು ಒಂದು ಹಂತಕ್ಕೆ ತರಲಾಗಿದೆ. ಸುಮಾರು 5,500 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸರ್ವೆ ಸಹ ಆಗಿ, ಅಧಿಸೂಚನೆ ಹೊರಡಿಸಲಾಗಿದೆ. ಹಂತ, ಹಂತವಾಗಿ ಇದರ ಲಾಭ ಅರ್ಹ ಕುಟುಂಬಗಳಿಗೆ ಸಿಗಲಿದೆ ಎಂದರು.ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು 40, 50 ವರ್ಷಗಳಾದರೂ ಹಕ್ಕುಪತ್ರ ಇಲ್ಲದೇ ಇರುವ ಕುಟುಂಬಗಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಮಳೆಗೆ ಮನೆ ಬಿದ್ದರೂ ಪರಿಹಾರ ಸಿಗುತ್ತಿಲ್ಲ. ಬ್ಯಾಂಕ್ ಸಾಲ ಸೌಲಭ್ಯವೂ ಗಗನಕುಸುಮವಾಗಿದೆ. ಹಾಗಾಗಿ ವಿಶೇಷ ಕಾಳಜಿ ವಹಿಸಿ ಹಕ್ಕುಪತ್ರ ದೊರಕಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಾನಗಲ್ ತಾಲೂಕಿನಿಂದ ಆರಂಭಗೊಂಡಿರುವ ಇಂಥದ್ದೊಂದು ಪ್ರತಯತ್ನವೀಗ ರಾಜ್ಯದಲ್ಲಿ ಆರಂಭವಾಗುವಂತಾಗಿದೆ. ಶಂಕರಿಕೊಪ್ಪದ ಅರ್ಹ ಕುಟುಂಬಗಳಿಗೂ ಹಕ್ಕುಪತ್ರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಯಾರಿಗೂ ಹಣ ಕೊಟ್ಟು ಮೋಸಕ್ಕೆ ಒಳಗಾಗಬೇಡಿ. ಅರ್ಹರಿದ್ದರೆ ಖಂಡಿತವಾಗಿಯೂ ಹಕ್ಕುಪತ್ರ ದೊರಕಲಿದೆ ಎಂದರು.ಮುಖಂಡರಾದ ಭರಮಣ್ಣ ಶಿವೂರ, ಶಂಭಣ್ಣ ದೇವಸೂರ, ಬಸಪ್ಪ ಮುದ್ದೆಣ್ಣನವರ, ಗುಡ್ಡಪ್ಪ ಗಡಿಯಂಕನಹಳ್ಳಿ, ನಿಂಗಪ್ಪ ಜಾಡಬಡಿಗೇರ, ನಾಗರಾಜ ಕೋರಿ, ದಾನಪ್ಪ ಬಿದರಿ, ಬಾನಪ್ಪ ಕೆರಿಮತ್ತಿಹಳ್ಳಿ, ಚನ್ನಬಸಪ್ಪ ಬೆನಕಣ್ಣನವರ, ಬಸವರಾಜ ಬೆಣ್ಣಿ, ಬಸವರಾಜ ಗಡಿಯಂಕನಹಳ್ಳಿ, ಚಂದ್ರಯ್ಯ ಹಿರೇಮಠ, ಪಾರವ್ವ ದೇವಸೂರ, ಶಾಂತವ್ವ ಕಾಳಂಗಿ ಇದ್ದರು.