ಸಾರಾಂಶ
ಭದ್ರಾವತಿ: ನಗರದಲ್ಲಿ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಶಾಖೆ ನೂತನ ಅಧ್ಯಕ್ಷ ಎಚ್.ಆರ್.ರಂಗನಾಥ್ ಭರವಸೆ ನೀಡಿದರು.
ಭದ್ರಾವತಿ: ನಗರದಲ್ಲಿ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಶಾಖೆ ನೂತನ ಅಧ್ಯಕ್ಷ ಎಚ್.ಆರ್.ರಂಗನಾಥ್ ಭರವಸೆ ನೀಡಿದರು.
ಗುರುವಾರ ಸಂಘದ ವತಿಯಿಂದ ನ್ಯೂಟೌನ್ ಬಂಟರ ಭವನದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಇಎಸ್‌ಐ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನಗರದಲ್ಲಿ ಕಾರ್ಮಿಕರು ಇಎಸ್‌ಐ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಕಷ್ಟು ತೊಂದರೆ ಅನುಭವಿಸಬೇಕಾದ ಸಂದರ್ಭದಲ್ಲಿ ಎಂಪಿಎಂ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ನಡೆಸಿದ ನಿರಂತರ ಹೋರಾಟದ ಪ್ರಯತ್ನದ ಫಲವಾಗಿ ಹಾಗೂ ಶಾಸಕರು ಹೆಚ್ಚಿನ ಆಸಕ್ತಿವಹಿಸಿದ ಹಿನ್ನೆಲೆಯಲ್ಲಿ ಇಎಸ್‌ಐ ಆಸ್ಪತ್ರೆ ಸೌಲಭ್ಯಗಳು ಕಾರ್ಮಿಕರಿಗೆ ಸಮರ್ಪಕವಾಗಿ ಲಭಿಸುತ್ತಿವೆ. ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಇಂತಹ ಕ್ಷೇತ್ರದಲ್ಲಿ ಸಂಘಟನೆ ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತಷ್ಟು ಸಂಘಟಿತಗೊಂಡು ಜವಾಬ್ದಾರಿಯನ್ನು ವಹಿಸಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಆಡಳಿತ ವಿಮಾ ವೈದ್ಯಾಧಿಕಾರಿ ಡಾ.ಎಚ್.ಆರ್.ವಿಜಯಮೂರ್ತಿ, ಸರ್ಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ನಾನು ವಿಮಾ ಕಾರ್ಮಿಕರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಕಾರ್ಮಿಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಂತಹ ಸಂಘಟನೆಗಳು ಸಹಕಾರಿಯಾಗಿವೆ ಎಂದರು.ನೇತ್ರ ತಜ್ಞ ಡಾ.ಕುಮಾರಸ್ವಾಮಿ ಮಾತನಾಡಿ, ಕಣ್ಣುಗಳ ರಕ್ಷಣೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ರಾಜಾಸಾಬ್.ಎಚ್.ನಂದಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ನಯನ ಆಸ್ಪತ್ರೆ ಇಎಸ್ಐ ಆಡಳಿತ ವಿಮಾ ವೈದ್ಯಾಧಿಕಾರಿ ಡಾ.ಈಶ್ವರಪ್ಪ, ಸಂಘದ ಜಿಲ್ಲಾ ಶಾಖೆ ಉಪಾಧ್ಯಕ್ಷ ಬಿ.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಅಜ್ಜಯ್ಯ(ಅಜೇಯ್), ಸಂಘಟನಾ ಕಾರ್ಯದರ್ಶಿ ಎಂ.ಎನ್ ಶಿವಕುಮಾರ್, ಖಜಾಂಚಿ ಕೆ.ವಿ.ರವೀಂದ್ರ, ಹಾಗೂ ತಾಲೂಕು ನೂತನ ಉಪಾಧ್ಯಕ್ಷ ಪುಟ್ಟಮಾದಯ್ಯ, ಕಾರ್ಯದರ್ಶಿ ಚಿಕ್ಕಣ್ಣ ಮತ್ತು ನಿರ್ದೇಶಕ ವೆಂಕಟೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ವಿಮಾದಾರರಿಗೆ ನೇತ್ರ ತಪಾಸಣೆ ನಡೆಸಲಾಯಿತು.