ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪುರಸಭೆ ಆಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪುರಸಭೆ ಆಡಳಿತ ಮಂಡಳಿ ಕೂಡ ಪೌರಕಾರ್ಮಿಕರ ಅಗತ್ಯತೆಗಳಿಗೆ ಒತ್ತು ನೀಡುತ್ತಿದೆ. ಪೌರಕಾರ್ಮಿಕರ ಅಗತ್ಯಕ್ಕೆ ತಕ್ಕಂತೆ ಉಪಹಾರ ವ್ಯವಸ್ಥೆ ಕೂಡ ಕಲ್ಪಿಸಿಕೊಡಲಾಗಿದೆ. ಪೌರಕಾರ್ಮಿಕರು ವಾಸಿಸುವ ಮನೆಗಳ ರಿಪೇರಿಗೆ ಕೂಡ ಈಗಾಗಲೆ ಕ್ರಮವಹಿಸಲಾಗಿದೆ. ಸುರಕ್ಷತಾ ಧಿರಿಸು, ಸಮವಸ್ತ್ರಗಳಿಗೆ ಸೇರಿದಂತೆ ಪೌರಕಾರ್ಮಿಕರ ಅನುಕೂಲಕ್ಕಾಗಿಯೇ ಪುರಸಭೆಯಿಂದ ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ತಮ್ಮ ಆರೋಗ್ಯ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕ ಸೇವೆ ಸದಾ ಸ್ಮರಣೀಯ. ಗೃಹಭಾಗ್ಯ ಯೋಜನೆ ಶೀಘ್ರವಾಗಿ ಒದಗಿಸುವಂತಾಗಬೇಕಿದೆ ಎಂದರು.ಸದಸ್ಯ ಜೈವರ್ಧನ್ ಮಾತನಾಡಿ, ಪೌರಕಾರ್ಮಿಕರನ್ನು ಪೋಷಕರ ಸಮಾನರಾಗಿ ಗೌರವಿಸುವಂತಾಗಬೇಕಿದೆ. ನಿವೇಶನ ರಹಿತ ಎಲ್ಲ ಪೌರಕಾರ್ಮಿಕರಿಗೆ ಆದಷ್ಟು ಬೇಗ ನಿವೇಶನ ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕಿದೆ. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪೌರಕಾರ್ಮಿಕರು ಮುಂದಾಗಬೇಕಿದೆ ಎಂದರು.
ಪುರಸಭೆ ಅಭಿಯಂತರ ರಂಗರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ರೀತಿಯ ಸವಲತ್ತುಗಳನ್ನು ಕಲ್ಪಿಸಿದೆ. ಈ ಪೈಕಿ ಪ್ರತಿ ವರ್ಷ ಆರೋಗ್ಯ ತಪಾಸಣೆ, ವಿಶೇಷ ಭತ್ಯೆ, ಸಂಕಷ್ಟ ಭತ್ಯೆ, ಪೌಷ್ಠಿಕ ಆಹಾರ, ಆರೋಗ್ಯ ವಿಮೆ ಮತ್ತಿತರ ಯೋಜನೆಗಳು ಒಳಗೊಂಡಿದೆ ಎಂದು ತಿಳಿಸಿದರು.ಸದಸ್ಯರಾದ ಎಂ.ಬಿ.ಸುರೇಶ್, ಸುರಯ್ಯಭಾನು, ವಿ.ಎಸ್.ಆನಂದಕುಮಾರ್, ಜಯಲಕ್ಷ್ಮಿ ನಂಜುಂಡಸ್ವಾಮಿ ಮಾತನಾಡಿದರು.
ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ. ಸತೀಶ್, ಉಪಾಧ್ಯಕ್ಷ ಎಚ್. ಎನ್. ಮೋಹನ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ಎಸ್.ಆರ್.ಗಣೇಶ್, ಉಪಾಧ್ಯಕ್ಷೆ ರಶ್ಮಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಸಿ.ಉದಯಕುಮಾರ್, ಸದಸ್ಯರಾದ ಜಯಲಕ್ಷಿ ಚಂದ್ರು, ಸುರಯ್ಯಭಾನು, ಶೈಲಾ ಕೃಷ್ಣಪ್ಪ, ನಾಮ ನಿರ್ದೇಶಿತ ಸದಸ್ಯರಾದ ಶಿವಶಂಕರ್, ಜಗದೀಶ್, ನವೀನ್, ಪ್ರಕಾಶ್, ಇದ್ದರು.ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆ ಸಿಬ್ಬಂದಿ ಪುಷ್ಪಾ ಪ್ರಾರ್ಥಿಸಿದರು.