ಸಾರಾಂಶ
ಶಿರಹಟ್ಟಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಎಲ್ಲ ಯೋಜನೆಗಳು ಪಾರದರ್ಶಕವಾಗಿ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಡಿ ಪಟ್ಟಣದಲ್ಲಿನ ಅಲೆಮಾರಿ ಸಮುದಾಯದ ಟೆಂಟ್ ವಾಸಿಗಳಿಗೆ ತಾಡಪತ್ರಿ ವಿತರಿಸಿ ಮಾತನಾಡಿದರು. ಈ ಸಮುದಾಯದ ಜನರು ನಿವೇಶನ ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಟೆಂಟ್ ವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಸರ್ಕಾರದ ಗಮನಕ್ಕೆ ತಂದು ನಿಗಮದ ಸಹಾಯಕ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದರು. ತಾಲೂಕಿನ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಟೆಂಟ್ ಮತ್ತು ಗುಡಿಸಲು ವಾಸಿಗಳಿಗೆ ಸೂರು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲೆಮಾರಿ ಹಾಗೂ ಅರೆ ಅಲೆಮಾರಿಗಳಲ್ಲಿ ೪೬ ಜನಾಂಗದವರಿದ್ದಾರೆ. ಇವರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಂಡು ಸ್ಥಿರವಾಗಿ ಒಂದು ಕಡೆ ನೆಲೆಸುವಂತೆ ಮಾಡಲು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಲ್ಲ ಯೋಜನೆಗಳ ಲಾಭ ಅರ್ಹರಿಗೆ ಮುಟ್ಟಬೇಕು ಎಂದರು.ನಿಗಮ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿದೆ. ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಇವರನ್ನು ಗುರುತಿಸಿ ಇವರ ಸ್ಥಿತಿಗತಿ ಸಮಸ್ಯೆಗಳನ್ನು ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ತಲುಪಿಸಲಾಗುವುದು. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಪ್ರತಿ ಹಂತದಲ್ಲೂ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಸವಲತ್ತುಗಳನ್ನು ಒದಗಿಸುತ್ತಿವೆ ಎಂದು ವಿವರಿಸಿದರು.ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮವು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕನಸಿನ ಕೂಸು. ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿಯೇ ಪ್ರಥಮ ಬಾರಿಗೆ ಈ ನಿಗಮವನ್ನು ಸ್ಥಾಪಿಸಲಾಗಿದೆ. ಈ ಜನಾಂಗವು ರಾಜ್ಯದಲ್ಲಿ ಹಲವು ಕಡೆ ಹರಿದು ಹಂಚಿ ಹೋಗಿದ್ದಾರೆ. ಅವರಲ್ಲಿ ಒಗ್ಗಟ್ಟಿಲ್ಲ. ಶೈಕ್ಷಣಿಕ ಜಾಗೃತಿ ಇಲ್ಲ. ಎಲ್ಲ ಸ್ತರದಲ್ಲೂ ವಂಚಿತ ಸಮುದಾಯವಾಗಿದೆ. ಅವರ ಈ ಸ್ಥಿತಿಯನ್ನು ಮನಗಂಡಿದ್ದ ಯಡಿಯೂರಪ್ಪನವರು ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ನಿಗಮವೊಂದನ್ನು ಸ್ಥಾಪಿಸಿದರು ಎಂದರು.ರಾಜ್ಯದಲ್ಲಿರುವ ಅವಕಾಶ ವಂಚಿತ ಶೋಷಿತ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಮೀಸಲಿಟ್ಟಿದೆ. ಸಂವಿಧಾನಬದ್ಧವಾಗಿ ಅವಶ್ಯವಿರುವ ಸೌಲಭ್ಯ, ಸವಲತ್ತುಗಳನ್ನು ಒದಗಿಸಿ ಕಟ್ಟಕಡೆಯ ತಳ ಸಮುದಾಯಗಳಿಗೂ ತಲುಪಿಸಿ ಪ್ರಗತಿ ಪಥದತ್ತ ಕೊಂಡೊಯ್ಯುವುದು ಸರ್ಕಾರದ ಉದ್ದೇಶ ಹಾಗೂ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
ಈ ಸಮುದಾಯದವರಿಗೆ ಒಟ್ಟು ೧೮೪ ತಾಡಪತ್ರಿ ಬಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿತರಣೆ ಮಾಡಲಾಗುವುದು ಎಂದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಮುಖಂಡ ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ನಂದಾ ಪಲ್ಲೇದ, ಫಕ್ಕೀರೇಶ ಕರಿಗಾರ, ಶಶಿ ಪೂಜಾರ, ರಾಮಣ್ಣ ಕಂಬಳಿ, ತಿಪ್ಪಣ್ಣ ಲಮಾಣಿ, ಬಸವರಾಜ ಪೂಜಾರ, ಪರಶುರಾಮ ಡೊಂಕಬಳ್ಳಿ, ಮಲ್ಲಿಕಾರ್ಜುನ ಕಬಾಡಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಸ್. ಸಂಕನೂರ ಇತರರು ಇದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))