ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ನವೆಂಬರ್ 2ರಂದು ಸಂಘ ಶತಾಬ್ದಿ ಅಂಗವಾಗಿ ಆರೆಸ್ಸೆಸ್ ಹಮ್ಮಿಕೊಂಡಿರುವ ಪಥ ಸಂಚಲನದ ದಿನವೇ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸೇರಿದಂತೆ ವಿವಿಧ ಸಂಘಟನೆಗಳವರು ಪಥ ಸಂಚಲನ, ಹೋರಾಟಗಳಿಗೆ ಅನುಮತಿ ಕೋರಿದ್ದರಿಂದ ಉಂಟಾಗಿರುವ ಗೊಂದಲ ತಿಳಿಗೊಳಿಸಲು ಹೈಕೋರ್ಟ್ ಕಲಬುರಗಿ ಪೀಠದ ಸೂಚನೆಯಂತೆ ಅ. 28 ರಂದು ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ.ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಆರೆಸ್ಸೆಸ್, ಭೀಮ್ ಆರ್ಮಿ, ದಲಿತ ಪ್ಯಾಂಥರ್, ಗೊಂಡ- ಕುರುಬ, ರೈತ ಸಂಘ ಹಸಿರು ಸೇನೆ, ಕ್ರಿಶ್ಚಿಯನ್ ಅಸೋಸಿಯೇಶನ್ ಸೇರಿದಂತೆ ನ. 2 ರಂದೇ ಚಿತ್ತಾಪುರದಲ್ಲಿ ಹೋರಾಟ ಹಾಗೂ ಪಥ ಸಂಚಲನ, ಹೋರಾಟಕ್ಕೆ ಅನುಮತಿ ಕೋರಿರುವ ವಿವಿಧ ಸಂಘಟನೆಗಳವರಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದೆ.
ಅ.28ರಂದು ಶಾಂತಿಸಭೆ ನಿಗದಿಪಡಿಸಿದೆ. ಸಭೆಗೆ ಹಾಜರಾಗುವಂತೆ 10 ಸಂಘಟನೆಗಳಿಗೆ ನೋಟಿಸ್ ನೀಡಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸೇಡಂ ಸಹಾಯಕ ಆಯುಕ್ತರು, ಚಿತ್ತಾಪೂರ ತಹಸೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಶಹಾಬಾದ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು ಶಂಕರಗೌಡ ಪಾಟೀಲ್, ಚಿತ್ತಾಪುರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಚಂದ್ರಶೇಖರ ತಿಗಡಿ ಇವರ ನೇತೃತ್ವದಲ್ಲಿ ಅ.28 ರಂದು ಪೂರ್ವಾಹ್ನ 11:30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಶಾಂತಿ ಸಭೆ ನಿಗದಿಯಾಗಿದೆ.ಆರೆಸ್ಸೆಸ್‌ನ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್, ಭಾರತೀಯ ದಲಿತ ಪ್ಯಾಂಥರ್ (ರಿ) ನ ಮಲ್ಲಪ್ಪ ಹೊಸ್ಮನಿ ಹಾಗೂ ಮುಖಂಡರು, ಭೀಮ್ ಆರ್ಮಿ, ರಾಜ್ಯ ಯುವ ಘಟಕ, ಗೊಂಡ-ಕುರುಬ ಎಸ್.ಟಿ. ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಘಟಕ, ಬೀದರ್ ನ ಕ್ರಿಶ್ಚಿಯನ್ ಹೌಸ್ ನ ಸಂಜಯ ಜಾಗೀರದಾರ, ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ, ಡಾ.ವಿಠಲ ದೊಡ್ಡಮನಿ, ಸಂತೋಷ ಬಿ. ಪಾಳಾ ಅವರಿಗೆ ಅವರಿಗೆ ಸಭೆಯ ಬಗ್ಗೆ ನೋಟಿಸ್ ನೀಡಲಾಗಿದೆ.
ಸಭೆಗೆ ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಹಾಜರಾಗಿ, ಲಿಖಿತ ಹೇಳಿಕೆ ಸಲ್ಲಿಸಲು ಬಯಸುವ ಸಂಘಟನೆಗಳು ಸಭೆಯಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶವಿದೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನವನ್ನು ವಿರೋಧಿಸಿ ನವೆಂಬರ್ 2 ರಂದು ಭೀಮ್ ಆರ್ಮಿ, ದಲಿತ್ ಪ್ಯಾಂಥರ್, ಹಸಿರು ಸೇನೆ, ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಶನ್, ಎಸ್.ಟಿ. ಪಟ್ಟಿಗೆ ಸೇರಿಸಲು ಆಗ್ರಹಿಸುವ ಕುರುಬ ಸಮುದಾಯ ಸೇರಿದಂತೆ ಏಳು ಸಂಘಟನೆಗಳು ತಮಗೂ ಅದೇ ದಿನ ಪ್ರತಿಭಟನೆ ಮತ್ತು ಪಥ ಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿರೋದನ್ನ ಇಲ್ಲಿ ಸ್ಮರಿಸಬಹುದಾಗಿದೆ.
ಸಂಘ ಶತಾಬ್ದಿ ಅಂಗವಾಗಿ ಅ. 19 ರಂದು ನಡೆಸಲು ಉದ್ದೇಶಿಸಿದ್ದ ಪಥ ಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿದ್ದನ್ನ ಪ್ರಶ್ನಿಸಿ ಸಂಘ ಕೋರ್ಟ್ ಮೊರೆ ಹೋಗಿತ್ತು. ಸಂಘದ ರಿಟ್ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಬೇರೊಂದು ದಿನಾಂಕ ನಿಗದಿ ಮಾಡಿ ಹೊಸ ಅರ್ಜಿ ಸಲ್ಲಿಸಲು ಸಂಘಕ್ಕೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಸಂಘ ನ. 2 ರಂದು ಪಥ ಸಂಚಲನಕ್ಕೆ ಅನುಮತಿ ಕೋರಿತ್ತು.ಸಂಘದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಗೊಂದಲ ತಿಳಿಗೊಳಿಸುವ ಭಾಗವಾಗಿ ಅ. 28 ರಂದು ಶಾಂತಿಸಭೆ ನಡೆಸಿ ವರದಿಯೊಂದಿಗೆ ಅ. 30ಕ್ಕೆ ಬನ್ನಿರೆಂದು ಸೂಚಿಸಿದ್ದರಿಂದ ಜಿಲ್ಲಾಡಳಿತ ಇದೀಗ ನ. 2ರಂದೇ ಚಿತ್ತಾಪುರದಲ್ಲಿ ಪಥ ಸಂಚಲನ, ಹೋರಾಟಕ್ಕೆ ಅನುಮತಿ ಕೋರಿರುವ ವಿವಿದ ಸಂಘಟನೆಗಳ ಪ್ರಮುಖರಿಗೆ ಜಿಲ್ಲಾಡಳಿತ ಶಾಂತಿಸಭೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ.
)
;Resize=(128,128))
;Resize=(128,128))