ಸಾರಾಂಶ
ಕಾರವಾರ: ಐಎನ್ಎಸ್ ಕದಂಬ ನೌಕಾನೆಲೆಯಿಂದ ಸ್ಥಳೀಯರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತರುವಾಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ನೌಕಾನೆಲೆ ನಿರಾಶ್ರಿತರಿಗೆ ಭೂ ಪರಿಹಾರ ಕೊಡುವಲ್ಲಿ ವಿಳಂಬವಾಗಿದೆ. ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಯಾವ ಪ್ರಯತ್ನ ನಡೆಯಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ನಿರಾಶ್ರಿತರ ಕುಟುಂಬಕ್ಕೆ ಉದ್ಯೋಗ, ಸ್ಥಳೀಯರಿಗೆ ಉದ್ಯೋಗ, ಗುತ್ತಿಗೆ ನೀಡಿಕೆ, ಯುವಕರಿಗೆ ಸ್ಕಿಲ್ ಟ್ರೇನಿಂಗ್ ಕೊಡಿಸಿ ಇಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗುವ ಅರ್ಹತೆ ಬೆಳಸುವ ಬಗ್ಗೆ ಸಹ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಾಗಿದೆ. ಮಳೆಗಾಲದಲ್ಲಿ ನೌಕಾನೆಲೆ ಹೊರಗಡೆ ಜಲಾವೃತವಾಗಿ ಜನತೆಗೆ ತೊಂದರೆ ಆಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಾಗಲೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ.
ನೌಕಾಪಡೆ ನೇಮಕಾತಿ ಪರೀಕ್ಷಾ ಕ್ಷೇಂದ್ರ ಸ್ಥಳೀಯವಾಗಿ ಆಗಬೇಕೆಂದು ಮನವಿ ಮಾಡಲಾಗಿದೆ. ಐಎನ್ ಎಸ್ ವಜ್ರಕೋಶದಲ್ಲಿ ದೊಡ್ಡ ಪ್ರಮಾಣದ ಶಬ್ದದಿಂದ ಮನೆಗಳಿಗೆ ಹಾನಿಯಾಗುತ್ತಿರುವುದು ಕಂಡುಬಂದಿದೆ. ಈ ಬಗ್ಗೆಯೂ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.ಬಿಜೆಪಿ ರಾಜ್ಯ ಅಧ್ಯಕ್ಷೆ ರೂಪಾಲಿ ನಾಯ್ಕ ಹಾಗೂ ಕೆಲ ಸಂಘಟನೆಗಳು ಕುಂದು ಕೊರತೆಗಳ ಬಗ್ಗೆ ನೀಡಿದ ಮನವಿಯನ್ನು ಸಚಿವ ರಾಜನಾಥ ಸಿಂಗ್ ಅವರಿಗೆ ನೀಡಿರುವುದಾಗಿ ಕಾಗೇರಿ ತಿಳಿಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಪ್ರಗತಿಯಾಗುತ್ತಿದೆ. ಜಗತ್ತಿನ ವೇಗಕ್ಕೆ ಸಮನಾಗಿ ಭಾರತ ಬೆಳೆಯುತ್ತಿದೆ. ರಕ್ಷಣಾ ಕ್ಷೇತ್ರದಲ್ಲೂ ಭಾರತದ ಬೆಳವಣಿಗೆ ಹೆಮ್ಮೆಯ ಸಂಗತಿ ಎಂದರು.