ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪತ್ರಕರ್ತರ ಸಕಲ ಸಮಸ್ಯೆ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ₹ 5 ಲಕ್ಷ ಠೇವಣಿ ಇರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಭರವಸೆ ನೀಡಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿ ಎಂಬ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿದ ಸಚಿವರು ಠೇವಣಿ ಇರಿಸುವ ಭರವಸೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ನಾಲ್ಕನೇಯ ಸ್ತಂಭವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಡಾ.ಫ.ಗು.ಹಳಕಟ್ಟಿ ಅವರು ಆರಂಭಿಸಿದ ನವ ಕರ್ನಾಟಕ ಪತ್ರಿಕೆ ಕರ್ನಾಟಕ ಏಕೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿತು. ಆ ಮೂಲಕ ವಿಜಯಪುರ ಜಿಲ್ಲೆ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ. ಮೊಹರೆ ಹನುಮಂತರಾಯರು, ವಿ.ಬಿ.ನಾಯಕರು, ಟಿ.ಕೆ.ನಾಯಕರು ಹೀಗೆ ಅನೇಕ ಪತ್ರಕರ್ತರು ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕೃಷಿ ಮತ್ತು ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಪತ್ರಕರ್ತರ ಹಿತರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಠೇವಣಿ ಇರಿಸುವ ಕಾರ್ಯಕ್ಕೆ ನಾನು ಕೈ ಜೋಡಿಸುತ್ತೇನೆ. 5 ಲಕ್ಷ ಠೇವಣಿ ಇರಿಸುವುದಾಗಿ ಘೋಷಿಸಿದರು. ವೈಜ್ಞಾನಿಕ ಹಾಗೂ ಸಂಶೋಧನಾತ್ಮಕ ಬರವಣಿಗೆಗಳು ಇಲ್ಲದೇ ಇರುವುದರಿಂದ ಸಮಾಜಕ್ಕೆ ಅನೇಕ ರೀತಿಯ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಸಂಶೋಧನಾತ್ಮಕ, ವೈಜ್ಞಾನಿಕ ನೆಲೆಗಟ್ಟಿನ ವಿಚಾರಗಳು ಪ್ರಸಾರಗೊಳ್ಳಬೇಕಿದೆ. ದೃಶ್ಯ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಪ್ರಥಮ ಆದ್ಯತೆಯಾಗಿದ್ದು, ಪ್ರಗತಿ 2ನೇ ಆದ್ಯತೆಯಾಗಿದೆ. ಆದರೆ ಪತ್ರಿಕೆಗಳಿಗೆ ಪ್ರಗತಿ ವಿಷಯವೇ ಅಗ್ರವಾಗಿರುವುದು ಸಂತೋಷದ ಸಂಗತಿ ಎಂದರು.ಶಿವನ ಮೂರನೇಯ ಕಣ್ಣಿನಂತೆ ಪತ್ರಕರ್ತರು ಸಮಾಜದ ನಾಲ್ಕನೇಯ ಕಣ್ಣು ಇದ್ದಂತೆ. ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪತ್ರಕರ್ತರು ಕಣ್ಣು ತೆರೆಯಬೇಕು. ಡಾ.ಫ.ಗು.ಹಳಕಟ್ಟಿ, ಮೊಹರೆ ಹನುಮಂತರಾಯರು ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಹೇಳಿದರು.ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಗ್ರಾಮೀಣ ಪತ್ರಕರ್ತರ ಸವಾಲುಗಳ ಕುರಿತು ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಸಹ ಪತ್ರಿಕೋದ್ಯಮ ವಿಶಾಲವಾಗಿ ವ್ಯಾಪಿಸಿದೆ. ತಮ್ಮ ಗ್ರಾಮಕ್ಕೆ ಯಾವ ಕೈಗಾರಿಕೆ ಬರಬೇಕು. ಯಾವ ಯೋಜನೆ ಬರಬೇಕು ಎಂಬ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂಬ ಬಗ್ಗೆ ವಿವರಿಸಿದರು.ಎಸ್ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಬಸವರಾಜ ಯಲಿಗಾರರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಕಾನಿಪ ಪ್ರಮುಖರಾದ ಕೆ.ಕೆ.ಕುಲಕರ್ಣಿ, ಕೌಶಲ್ಯ ಪನಾಳಕರ ಇತರರು ಇದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಲೋಕೋರೆ ಪ್ರಾರ್ಥಿಸಿದರು. ಕಾನಿಪ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ ಸ್ವಾಗತಿಸಿದರು. ಉಪಾಧ್ಯಕ್ಷ ಇಂದುಶೇಖರ ಮಣೂರ ನಿರೂಪಿಸಿದರು.-----
ಕೋಟ್‌ಪತ್ರಕರ್ತರ ಆರೋಗ್ಯ ರಕ್ಷಣೆಗೆ ಅಭಯ ತುಂಬುವಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ವರದಾನವಾಗಿದೆ. ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಯೋಜನೆಯಾಗಿದ್ದು, ಮಾನ್ಯತೆ ಇಲ್ಲದವರಿಗೂ ಈ ಯೋಜನೆ ವಿಸ್ತರಿಸಬೇಕು. ಜ್ಞಾನಸ್ಥ, ನ್ಯಾಯಾಧೀಶ ಸ್ಥಾನದಲ್ಲಿ ನಿಂತು ಸಮಾಜದ ನಂಬಿಕೆಯನ್ನು ಪತ್ರಕರ್ತ ಉಳಿಸಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾನು ಪತ್ರಕರ್ತ ಎಂದು ಹೇಳುವವರ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ಕಡಿವಾಣ ಹಾಕಿ ನೈಜ ಪತ್ರಕರ್ತರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಂಘದ ಮೇಲಿದೆ.ಶಿವಾನಂದ ತಗಡೂರ, ಕಾನಿಪ ಸಂಘದ ರಾಜ್ಯಾಧ್ಯಕ್ಷರು