ಕನ್ನಡಪ್ರಭ ವಾರ್ತೆ ಇಂಡಿ ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಚಿಕ್ಕಬೇವನೂರ, ಹೊರ್ತಿ ಗ್ರಾಮದ ಜಮೀನುಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ಬರ ಪರಿಸ್ಥಿತಿ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಚಿಕ್ಕಬೇವನೂರ, ಹೊರ್ತಿ ಗ್ರಾಮದ ಜಮೀನುಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ಬರ ಪರಿಸ್ಥಿತಿ ವೀಕ್ಷಿಸಿದರು.ಮಳೆ ಅಭಾವದಿಂದಾಗಿ ಹೊರ್ತಿ, ಚಿಕ್ಕಬೇವನೂರ ಸೇರಿದಂತೆ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಪ್ರಮುಖ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಹಾನಿಗೊಳಗಾಗಿರುವ ಬೆಳೆಗಳನ್ನು ಶಾಸಕರು ವೀಕ್ಷಿಸಿ, ಹಾನಿಯ ತೀವ್ರತೆಯನ್ನು ಪರೀಕ್ಷಿಸಿದರು. ತೇವಾಂಶದ ಕೊರತೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವ ಬಗ್ಗೆ ರೈತರ ಅಳಲನ್ನು ತೋಡಿಕೊಂಡರು.ನಂತರ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ರೈತರ ಸಮಸ್ಯೆಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಗರಿಷ್ಠ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಮಳೆಯ ಕೊರತೆಯಿಂದಾಗಿ ಸ್ಥಳೀಯ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಬೆಳೆಗಳ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. ಕಬ್ಬು ಹಾಗೂ ತೊಗರಿ ಬೆಳೆ, ಮಳೆಯ ಅಭಾವದಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಬೆಳೆ ಇಲ್ಲದೆ ರೈತರು ಎದುರಿಸುತ್ತಿರುವ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಗಳ ಕುರಿತು ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ನಿಮ್ಮ ಹಿಂದೆ ಸರ್ಕಾರವಿದೆ. ಯಾವುದೇ ಕಾರಣಕ್ಕೂ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾಗಿ ತಿಳಿಸಿದರು.ರೈತರು ದೇಶದ ಅನ್ನದಾತರು. ದೇಶದ ಬೆನ್ನೆಲುಬು. ಅವರ ಬೆವರಿನ ಶ್ರಮಕ್ಕೆ ಸೂಕ್ತ ಫಲ ಮತ್ತು ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಈ ತೀವ್ರ ಬರ ಪರಿಸ್ಥಿತಿಯಿಂದ ರೈತ ಸಮುದಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ತಕ್ಷಣದ ನೆರವು ಹಾಗೂ ಸೂಕ್ತ ಬೆಳೆಹಾನಿ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಈ ಸಂದರ್ಭದಲ್ಲಿ ಇದ್ದರು.