ಮುಂದಿನ ದಿನಗಳಲ್ಲಿಯೂ ದೇಶದ, ಕ್ಷೇತ್ರದ ಅಭಿವೃದ್ಧಿಯನ್ನು ಮಾಡಬೇಕು. ಜನರ ಭಾವನೆ, ಕಷ್ಟ- ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಕೈಗೊಳ್ಳಬೇಕು.
ಸಿದ್ದಾಪುರ: ದೇಶದ ಮತದಾರರು ಪ್ರಬುದ್ಧ ಮತದಾರರಾಗಿದ್ದು, ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಿದ್ದಾರೆ. ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರು ನನಗೆ ಲೀಡ್ ಕೊಡುವ ಮೂಲಕ ಸಂಸದನನ್ನಾಗಿ ಮಾಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಲ್ಲಿಯ ಶಂಕರ ಮಠದ ಸಭಾಂಗಣದಲ್ಲಿ ಬಿಜೆಪಿ ಮಂಡಲದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿಯೂ ದೇಶದ, ಕ್ಷೇತ್ರದ ಅಭಿವೃದ್ಧಿಯನ್ನು ಮಾಡಬೇಕು. ಜನರ ಭಾವನೆ, ಕಷ್ಟ- ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರಣ್ಯ ಒತ್ತುವರಿ ಮಾಡಿಕೊಂಡು ಜೀವಿಸುತ್ತಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಸಮುದ್ರ ಕೊರೆತ, ವಿಮಾನ ನಿಲ್ದಾಣ ಹೀಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಲ್ಲಿಯೂ ಪ್ರಯತ್ನಶೀಲನಾಗುತ್ತೇನೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಾಗೇರಿಯವರು ಸನ್ನಡತೆಯಿಂದಾಗಿ ರಾಜ್ಯದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದೀಗ ಕೇಂದ್ರಕ್ಕೂ ಕಾಲಿಟ್ಟಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಹುದ್ದೆಗೆ ಏರಿ ಕೇಂದ್ರ ಸರ್ಕಾರದ ಒಂದು ಭಾಗವಾಗಲಿದ್ದಾರೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಶೋಷಿತರಿಗೆ ಸಲ್ಲಬೇಕಾಗಿದ್ದ ವಾಲ್ಮೀಕಿ ನಿಗಮದ ಹಣ ತಿಂದು ತೇಗುವ ಪ್ರಯತ್ನ ನಡೆಸಿದೆ. ಹಣಕಾಸು ಇಲಾಖೆಯನ್ನು ತಮ್ಮ ಕೈಯ್ಯಲ್ಲಿರಿಸಿಕೊಂಡಿರುವ ಮುಖ್ಯಮಂತ್ರಿಗಳೇ ಎಲ್ಲದ್ದಕ್ಕೂ ಜವಾಬ್ದಾರರಾಗಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜೆಡಿಎಸ್‌ನ ಉಪೇಂದ್ರ ಪೈ, ಜೀವಜಲ ಕಾರ್ಯಪಡೆಯ ಶ್ರೀನಿವಾಸ ಹೆಬ್ಬಾರ, ಬಿಜೆಪಿ ರಾಜ್ಯ ಕಾರ‍್ಯಕಾರಣಿಯ ಸದಸ್ಯ ಕೆ.ಜಿ. ನಾಯ್ಕ, ಮಂಡಲ ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರ ಇತರರು ಮಾತನಾಡಿದರು. ಬಿಜೆಪಿಯ ಗುರುಪ್ರಸಾದ ಹೆಗಡೆ ಹರ್ತೆಬೈಲ, ಪ್ರಶಾಂತ ನಾಯ್ಕ, ಎಂ.ಜಿ. ಹೆಗಡೆ ಗೆಜ್ಜೆ, ಎಂ.ವಿ. ಭಟ್ಟ ತಟ್ಟಿಕೈ, ಈಶ್ವರ ನಾಯ್ಕ, ರಾಘವೇಂದ್ರ ಶಾಸ್ತ್ರಿ, ರವಿ ಹೆಗಡೆ ಹೂವಿನಮನೆ, ಸುಮನಾ ಕಾಮತ, ಅಣ್ಣಪ್ಪ ನಾಯ್ಕ, ಕೃಷ್ಣಮೂರ್ತಿ ಕಡಕೇರಿ, ಮಂಜುನಾಥ ಭಟ್ಟ ಇದ್ದರು. ಕೇಶವ ಬಿಳಗಿ ಅವರ ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿದರು. ಗುರುರಾಜ ಶಾನಭಾಗ ನಿರ್ವಹಿಸಿದರು.