ಉಪ್ಪಿನಂಗಡಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕೊಯಿಲ ಪಶು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ತರಗತಿಗಳನ್ನು ಆರಂಭಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ಕಡಬ ತಾಲೂಕು ಕೊಯಿಲದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾಮಗಾರಿಗಳು ಮತ್ತು ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು. ಕಾಲೇಜು ಆರಂಭಕ್ಕೆ ಮುನ್ನ ಭಾರತೀಯ ಪಶು ವೈದ್ಯಕೀಯ ಕೌನ್ಸಿಲ್‌ನಿಂದ ಅನುಮತಿ ದೊರಕಬೇಕಾಗಿದೆ, ಅದಕ್ಕೂ ಮುನ್ನ ಇಲ್ಲಿ ಏನೆಲ್ಲಾ ಕೊರತೆಗಳಿವೆ ಅದನ್ನು ಸರಿಪಡಿಸಬೇಕಾಗಿದ್ದು, ಅದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮೊದಲನೇ ವರ್ಷ ಮತ್ತು ೨ನೇ ವರ್ಷಕ್ಕೆ ತರಗತಿ ಪ್ರಾರಂಭಿಸಲು ಏನೆಲ್ಲಾ ಸೌಲಭ್ಯಗಳು ಬೇಕಾಗಿದೆಯೋ ಅವುಗಳಿಗೆ ಸಿದ್ದತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲಾಗುವುದು. ೧೩೬ ಕೋಟಿ ರು. ಯೋಜನೆ: ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು ೧೩೬ ಕೋಟಿ ರು. ವ್ಯಯ ಆಗಿದ್ದು, ಉಳಿದಂತೆ ವ್ಯವಸ್ಥೆಗಳಿಗೆ ಇನ್ನೂ ೧೮ ಕೋಟಿ ರು. ಬಿಡುಗಡೆ ಆಗಿದೆ. ಕಾಲೇಜು ಆರಂಭಕ್ಕೆ ೨೫ ಉಪನ್ಯಾಸಕರ ಹುದ್ದೆಗಳ ಅಗತ್ಯ ಇದ್ದು, ಈ ಪೈಕಿ ೧೩ ಹುದ್ದೆಗಳು ಭರ್ತಿ ಆಗಿವೆ. ಇತರೇ ೩೨ ಸಿಬ್ಬಂದಿಗಳಿಗಾಗಿ ಟೆಂಡರ್ ಕರೆಯಲಾಗಿದೆ. ಸರ್ಕಾರ ಹಂತ ಹಂತವಾಗಿ ಇಲ್ಲಿನ ಅಗತ್ಯತೆಗಳನ್ನು ಪೂರೈಸಲಿದೆ ಎಂದರು.
ಕಟ್ಟಡ ಕಾಮಗಾರಿ ಕಳಪೆ: ಕಟ್ಟಡ ಕಾಮಗಾರಿ ತೀರಾ ಕಳಪೆಯಾಗಿದ್ದು, ಮಳೆಗಾಲದಲ್ಲಿ ಕಟ್ಟಡದ ಮೇಲಿನ ಸ್ಲಾಬ್‌ನಿಂದ ನೀರು ಸೋರುತ್ತಿದೆ. ಅದಕ್ಕಾಗಿ ಅದರ ಮೇಲೆ ತಗಡು ಶೀಟು ಹಾಕಲಾಗಿದೆ. ಹೀಗಿದ್ದರೂ ಮಳೆಗೆ ಕೆಲವೊಂದು ಕಡೆಯಲ್ಲಿ ಇನ್ನೂ ಸೋರುತ್ತಿದೆ ಎಂದು ಪತ್ರಕರ್ತರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಗಳನ್ನು ಪ್ರಶ್ನಿಸಿ, ಅದನ್ನು ಸರಿಪಡಿಸುವಂತೆ ಸೂಚಿಸಿದರು. ಈ ಹಿಂದೆ ಅಥಣಿ ಎಂಬಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವಾಗಲೇ ತರಾತುರಿಯಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಿಸಿ ತೊಂದರೆಯಾಗಿದೆ. ಹಾಗಾಗಿ ಇಲ್ಲಿಯೂ ವಿಳಂಭ ಮಾಡುತ್ತಿದ್ದಾರೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂತಹ ಘಟನೆಯಿಂದಾಗಿಯೇ ಇಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ತರಗತಿ ಆರಂಭಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ ಎಂದರುಗೋ ಶಾಲೆಗೂ ಭೇಟಿ: ಸಚಿವರು ಪಶು ಸಂಗೋಪನಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗೋ ಶಾಲೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿ ಡಾ. ಅಜಿತ್ ಮಾಹಿತಿ ನೀಡಿದರು. ಬಳಿಕ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ. ಚಿದಾನಂದ ಕೆ.ಬಿ. ಮತ್ತು ಡಾ. ಪ್ರಸನ್ನ ಹೆಬ್ಬಾರ್ ಸಚಿವರಿಗೆ ಮಾಹಿತಿ ನೀಡಿದರು. ಸಚಿವರೊಂದಿಗೆ ಶಾಸಕಿ ಭಾಗೀರಥಿ ಮುರುಳ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ‍್ಯದರ್ಶಿ ವಿನೋದ್ ಪ್ರಿಯ ಆರ್., ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಕೆ.ಸಿ. ವೀರಣ್ಣ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತೆ ಶಿಲ್ಪಾ ನಾಗ್ ಸಿ.ಟಿ., ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ. ನಾಗರಾಜು, ಭಾರತೀಯ ಪಶು ವೈದ್ಯಕೀಯ ಪರಿಷತ್ ಮಂಡಳಿ ಸದಸ್ಯ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಕೊಯಿಲ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಉಪ ಕುಲಪತಿ ಡಾ. ಶಿವಕುಮಾರ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ, ಕೆಪಿಸಿಸಿ. ಸಂಯೋಜಕ ಜಿ. ಕೃಷ್ಣಪ್ಪ ರಾಮಕುಂಜ, ಜಿಪಂ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್. ಆದಂ, ಗ್ರಾಪಂ ಮಾಜಿ ಸದಸ್ಯರಾದ ಯತೀಶ್ ಗೌಡ, ನಝೀರ್ ಪೂರಿಂಗ, ಲಕ್ಷ್ಮೀನಾರಾಯಣ ರಾವ್, ಬಾಲಕೃಷ್ಣ ಗೌಡ ಬಿ., ಪ್ರಶಾಂತ್ ಆರ್.ಕೆ., ಶರತ್ ಕೆದಿಲ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಬಗ್ಗೆ ನಾನೇನೂ ಹೇಳುವ ಹಾಗಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಣದಲ್ಲಿ ನಾನಿಲ್ಲ. ನಾನೊಬ್ಬಕಾಂಗ್ರೆಸ್ ಪಕ್ಷ ಬಣದವ ಎಂದು ರಾಜ್ಯ ರಾಜಕೀಯದ ಬಗ್ಗೆ ಪತ್ರಕರ್ತರ ಪಶ್ನೆಗೆ ಉತ್ತರಿಸಿದರು.