ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿ ಆರಂಭಕ್ಕೆ ಪ್ರಯತ್ನ: ಶಾಸಕ ಶಿವಣ್ಣನವರ

| Published : May 13 2025, 11:51 PM IST

ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿ ಆರಂಭಕ್ಕೆ ಪ್ರಯತ್ನ: ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಸುತ್ತಮುತ್ತಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಚಿಕ್ಕಬಾಸೂರು, ಬ್ಯಾಡಗಿ, ಸುಣಕಲ್ಲಬಿದರಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪದವಿ, ಪಿಯುಸಿ ಕಾಲೇಜುಗಳನ್ನು ಆರಂಭಿಸಿದೆ.

ಬ್ಯಾಡಗಿ: ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿ ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೂರಕವಾಗಬೇಕಿದ್ದು, ಹಾವೇರಿ ವಿವಿ ಕುಲಪತಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸವರಾಜ ಶಿವಣ್ಣನವರ ತಿಳಿಸಿದರು.ಸೋಮವಾರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಬ್ಯಾಡಗಿ ಸುತ್ತಮುತ್ತಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಚಿಕ್ಕಬಾಸೂರು, ಬ್ಯಾಡಗಿ, ಸುಣಕಲ್ಲಬಿದರಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪದವಿ, ಪಿಯುಸಿ ಕಾಲೇಜಗಳನ್ನು ಆರಂಭಿಸಿದೆ. ಅಗತ್ಯ ಕಟ್ಟಡ, ಮೂಲ ಸೌಲಭ್ಯ ನೀಡಿದರೂ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಬೇಸರವಾಗಿದೆ. ₹130 ಲಕ್ಷ ವೆಚ್ಚದಲ್ಲಿ ಕೊಠಡಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ಉಚಿತ ಶಿಕ್ಷಣದ ಜತೆ ಗ್ರಂಥಾಲಯ, ಸ್ಕಾಲರ್‌ಶಿಪ್‌, ಕ್ರೀಡಾ ಪೀಠೋಪಕರಣಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಅಗತ್ಯ ಉಪನ್ಯಾಸಕರ ಬಳಗ ಗುಣಮಟ್ಟವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಮಾಡಬೇಕಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ನಿಗಾ ವಹಿಸಬೇಕಿದೆ. ಕಾಲೇಜು ಬಳಿ 100 ವಿದ್ಯಾರ್ಥಿಗಳಿಗೆ ಬಿಸಿಎಂ ಇಲಾಖೆ ವತಿಯಿಂದ ವಸತಿನಿಲಯ ಆರಂಭಿಸಲಾಗಿದೆ. ಪದವಿ ಕಾಲೇಜಿನ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ದಾಖಲಾತಿ ಏರಿಕೆ ಮಾಡುವಂತೆ ಸೂಚಿಸಿದರು.ಸ್ನಾತಕೋತ್ತರ ಪದವಿ:

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಂಎ ಹಾಗೂ ಎಂಕಾಂ, ಎಂಎಸ್ಸಿ ಪದವಿ ಪಡೆಯಲು ದೂರದ ಹಾವೇರಿ, ಧಾರವಾಡ, ದಾವಣಗೆರೆ ಸೇರಿದಂತೆ ಬೇರೆ ನಗರಗಳಿಗೆ ತೆರಳಬೇಕಿದೆ. ಈ ಹಿನ್ನೆಲೆ ಸ್ಥಳೀಯವಾಗಿ ಸ್ನಾತಕೋತ್ತರ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ. ಹಾವೇರಿ ವಿವಿ ಕುಲಪತಿಗಳು ಹಾಗೂ ಸ್ಥಳೀಯ ಕಾಲೇಜು ಪ್ರಾಂಶುಪಾಲರೊಂದಿಗೆ ಚರ್ಚಿಸುವೆ. ಇದರೊಂದಿಗೆ ಬಿಬಿಎ, ಎಂಬಿಎ ಸೇರಿದಂತೆ ಹೊಸ ಹೊಸ ಕೋರ್ಸ್‌ಗಳ ಆರಂಭಕ್ಕೆ ಒತ್ತು ನೀಡಲಾಗುವುದು ಎಂದರು. ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಶಿವನಗೌಡ್ರ ಪಾಟೀಲ ಮಾತನಾಡಿ, ತಾಲೂಕಿನ ಚಿಕ್ಕಬಾಸೂರು, ಸುಣಕಲ್ಲಬಿದರಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 300 ದಾಟಿದೆ. ಆದರೆ ಬ್ಯಾಡಗಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆಯಿದ್ದು, ಯಾವುದೇ ಕಾರಣಕ್ಕೂ ದಾಖಲಾತಿ ಇಳಿಮುಖವಾಗದಂತೆ ಎಚ್ಚರ ವಹಿಸಬೇಕು. ಶೀಘ್ರದಲ್ಲೆ ಹೊಸದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ನೇಮಕವಾಗಲಿದ್ದು, ಉಪನ್ಯಾಸಕರು, ಸರ್ವ ಸದಸ್ಯರು ಕಾಳಜಿಯಿಂದ ಕಾಲೇಜು ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.

ಆಶ್ರಯ ಸಮಿತಿ ಅಧ್ಯಕ್ಷ ಮುನಾಫಲಿ ಎರೆಸೀಮೆ ಸದಸ್ಯರಾದ ದುರ್ಗೆಶ ಗೋಣೆಮ್ಮನವರ, ಗಿರೀಶಸ್ವಾಮಿ ಇಂಡಿಮಠ, ಶ್ರೀನಿವಾಸ ಕುರಕುಂದಿ, ವರ್ತಕ ಬಸವರಾಜ ಸುಂಕಾಪುರ, ನಜೀರಅಹ್ಮದ್ ಶೇಖ್, ಪ್ರಾಂಶುಪಾಲ ಮಲ್ಲಿಕಾರ್ಜುನ ಕಡ್ಡಿಪುಡಿ, ರಮೇಶ ಸುತ್ತಕೋಟಿ, ಬೀರಪ್ಪ ಬಣಕಾರ, ಪ್ರಸಾದ್ ರೆಡ್ಡಿ, ಉಪನ್ಯಾಸಕಿ ಕವಿತಾ ಬನ್ನಿಹಟ್ಟಿ ಇತರರಿದ್ದರು.