ಒಂದು ಕಾಲದಲ್ಲಿ ಇಡೀ ರಾಜ್ಯವನ್ನೇ ಆಳಿದ ನೊಳಂಬ ಸಮಾಜದ ಶಕ್ತಿ ಕ್ಷೀಣಿಸುತ್ತಿದ್ದು, ನೊಳಂಬ ಸಮಾಜಕ್ಕೆ ನವಚೈತನ್ಯ ತುಂಬಲು, ರಾಜಕೀಯವಾಗಿ, ಶೈಕ್ಷಣಿಕವಾಗಿ ಶಕ್ತಿ ನೀಡಿ ಪುನರುಜ್ಜೀವನಗೊಳಿಸಲು ನಮ್ಮ ಕಾಯಕ ತಂಡ ಸಮಿತಿಯ ಚುನಾವಣೆಗೆ ಸ್ಪರ್ಧಿಸಿ ಗೆಲುವಿಗೆ ಶ್ರಮಿಸುತ್ತಿದ್ದು ನಮ್ಮ ತಂಡದ ಅಭ್ಯರ್ಥಿಗಳಿಗೆ ಸಮಾಜದ ಮತದಾರರು ಮತ ನೀಡಬೇಕೆಂದು ಕಾಯಕ ತಂಡದ ನಾಯಕ ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂಬಿ. ನಂದೀಶ ಮನವಿ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ತಿಪಟೂರು
ಒಂದು ಕಾಲದಲ್ಲಿ ಇಡೀ ರಾಜ್ಯವನ್ನೇ ಆಳಿದ ನೊಳಂಬ ಸಮಾಜದ ಶಕ್ತಿ ಕ್ಷೀಣಿಸುತ್ತಿದ್ದು, ನೊಳಂಬ ಸಮಾಜಕ್ಕೆ ನವಚೈತನ್ಯ ತುಂಬಲು, ರಾಜಕೀಯವಾಗಿ, ಶೈಕ್ಷಣಿಕವಾಗಿ ಶಕ್ತಿ ನೀಡಿ ಪುನರುಜ್ಜೀವನಗೊಳಿಸಲು ನಮ್ಮ ಕಾಯಕ ತಂಡ ಸಮಿತಿಯ ಚುನಾವಣೆಗೆ ಸ್ಪರ್ಧಿಸಿ ಗೆಲುವಿಗೆ ಶ್ರಮಿಸುತ್ತಿದ್ದು ನಮ್ಮ ತಂಡದ ಅಭ್ಯರ್ಥಿಗಳಿಗೆ ಸಮಾಜದ ಮತದಾರರು ಮತ ನೀಡಬೇಕೆಂದು ಕಾಯಕ ತಂಡದ ನಾಯಕ ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂಬಿ. ನಂದೀಶ ಮನವಿ ಮಾಡಿಕೊಂಡರು.೨೩ರ ಭಾನುವಾರದಂದು ನೊಳಂಬ ಲಿಂಗಾಯಿತ ರಾಜ್ಯ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ೫ವರ್ಷಗಳ ಅವದಿಗೆ ನಡೆಯುತ್ತಿರುವ ತುಮಕೂರು ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಯಕ ತಂಡದ ಪ್ರಣಾಳಿಕೆಯನ್ನು ನಗರದಲ್ಲಿ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ನಮ್ಮ ಸಮಾಜಕ್ಕೆ ಹೆಚ್ಚು ಪ್ರಾತಿನಿಧ್ಯ ಇರುತ್ತಿತ್ತು. ಬರುಬರುತ್ತಾ ನಮ್ಮ ಸಮಾಜದ ಸಂಘಟನೆಯ ಕೊರತೆಯಿಂದ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾಜದ ಪ್ರಾಧಾನ್ಯತೆ ಕಡಿಮೆಯಾಗುತ್ತಾ ಬಂದಿದೆ. ಅದರಲ್ಲಿಯೂ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತುಮಕೂರು ತಾಲೂಕುಗಳಲ್ಲಿ ಅತ್ಯಂತ ಶಕ್ತಿಯುತವಾಗಿದ್ದ ನಮ್ಮ ಸಂಘಟನೆ ಶಕ್ತಿ ಕಳೆದುಕೊಂಡಿದೆ. ನಮ್ಮ ಸಮಾಜದ ಸಂಘಟನೆ ಮಾಡಿ ಎಲ್ಲ ಕ್ಷೇತ್ರಗಳಲ್ಲೂ ಮತ್ತೆ ಪ್ರಾತಿನಿಧ್ಯ ತರುವುದೇ ನಮ್ಮ ೮ ಅಭ್ಯರ್ಥಿಗಳ ಕಾಯಕ ತಂಡದ ಗುರಿಯಾಗಿದೆ ಎಂದು ತಿಳಿಸಿದರು. ಮುಖಂಡರಾದ ರಾಯಸಂದ್ರ ರವಿ, ಪ್ರಸನ್ನಕುಮಾರ್ ಮಾತನಾಡಿದರು. ಈ ವೇಳೆ ಕಾಯಕ ತಂಡದ ಎಂ.ಎಂ.ಜಗದೀಶ್, ರೇಣುಕಾಪ್ರಸಾದ್ , ನಟರಾಜ್ ಬಿ.ಆರ್., ಶ್ರೀಕಾಂತ್ ಎಚ್.ಎಸ್., ಬರಗೂರು ಬಸವರಾಜು, ನಾಗೇಶ್ ಇತರರು ಉಪಸ್ಥಿತರಿದ್ದರು.